ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯುವಶಕ್ತಿ ಸೇವಾಪಥದ ವತಿಯಿಂದ, ಟೀಮ್ ಸನಾತನ್ ಮಂಗಳೂರು ಆಶ್ರಯದಲ್ಲಿ 4ನೇ ವಾರ್ಷಿಕ ಕಾರ್ಯಕ್ರಮವು ಜೂನ್ 22ರಂದು ಉರ್ವದ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಬೆಳಿಗ್ಗೆ 9.30ರಿಂದ ವಿವಿಧ ಸೇವಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಟೀಮ್ ಸನಾತನ್ ಮಂಗಳೂರು ಅಧ್ಯಕ್ಷ ಸಾಯಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ಬೆಳಿಗ್ಗೆ 9.30ಕ್ಕೆ ರಕ್ತದಾನ ಶಿಬಿರದೊಂದಿಗೆ ಆರಂಭವಾಗಲಿದೆ. ಸಂಜೆ 4 ಗಂಟೆಯಿಂದ ಕೀರ್ತನ್ ನಾಯ್ಕ್ ಮಡೂರು ಬಳಗದವರಿಂದ “ಭಕ್ತಿ ಸಂಗೀತ” ಕಾರ್ಯಕ್ರಮ ನಡೆಯಲಿದೆ.
ಸಂಜೆ 5.30ರಿಂದ 20ಕ್ಕೂ ಹೆಚ್ಚು ಅಶಕ್ತ ಕುಟುಂಬಗಳಿಗೆ ಸೇವಾನಿಧಿ ಹಸ್ತಾಂತರ, ಸೇವಾಸಾಧಕರಿಗೆ ಗೌರವ, ವಿವಿಧ ಸೇವಾ ಸಂಸ್ಥೆಗಳಿಗೆ ಅಭಿನಂದನೆ ಹಾಗೂ ಮಿತ್ರ ಸಂಸ್ಥೆಗಳಿಗೆ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ವಿವರಿಸಿದರು.
ಸಾಂಸ್ಕೃತಿಕ ವೈಭವದ ಅಂಗವಾಗಿ ನೀಲಾಶ್ರೀ ಕಲಾವಿದರು ವಾಮದಪದವು ತಂಡದ ವತಿಯಿಂದ 40ಕ್ಕೂ ಹೆಚ್ಚು ಪ್ರತಿಭಾನ್ವಿತ ಕಲಾವಿದರಿಂದ “ಅಪ್ಪೆ ಭ್ರಮರಿ” ಎಂಬ ತುಳುನಾಡಿನ ಕಥಾನಿರೂಪಣೆ ಹಾಗೂ ನೃತ್ಯ ಪ್ರದರ್ಶನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತೃಸಂಸ್ಥೆ ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷ ದೇವಿಪ್ರಸಾದ್ ಬೇಂಗದಡಿ, ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡ ಯೋಜನಾ ಸಮಿತಿ ಸದಸ್ಯ ದಿನೇಶ್ ಬಡೆಕೊಟ್ಟು, ಯುವಶಕ್ತಿ ಸೇವಾಪಥ ಸಮಿತಿಯ ಪ್ರಮುಖರಾದ ಕಾರ್ತಿಕ್ ಶೆಟ್ಟಿ ಬರ್ಕೆ, ದೀಪಕ್ ಸಾಲಿಯಾನ್, ದೀಕ್ಷಿತ್ ಕುಲಾಲ್, ಕಾರ್ತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.