ಉಡುಪಿ: ನಗರದಲ್ಲಿನ ಇಂದ್ರಾಳಿ ರೈಲ್ವೆ ನಿಲ್ದಾಣದ ಸಮೀಪ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಇಂದ್ರಾಳಿ ರೈಲ್ವೆ ನಿಲ್ದಾಣದ ಆಟೋ ಸ್ಟ್ಯಾಂಡ್ ಹತ್ತಿರ, ರೈಲ್ವೆ ಪ್ರಯಾಣಿಕರ ಸಂಚಾರ ಜೋರಾಗಿರುವ ಪ್ರದೇಶದಲ್ಲಿ ಹೆಬ್ಬಾವಿನ ಚಲನವಲನವನ್ನು ಗಮನಿಸಿದ ಆಟೋ ಚಾಲಕ ಪ್ರಶಾಂತ್ ಅವರು, ತಕ್ಷಣ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಒಳಕಾಡು ಅವರು, ಹಾವು ಹಿಡಿಯುವ ಪರಿಣಿತಿ ಹೊಂದಿರುವ ಆಟೋ ಚಾಲಕ ಬಶೀರ್ ಅವರನ್ನು ಕರೆಯಿಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಹೆಬ್ಬಾವು ರಸ್ತೆ ದಾಟುವ ವೇಳೆ ಅದರ ಮೇಲೆ ದ್ವಿಚಕ್ರ ವಾಹನ ಹರಿದ ಪರಿಣಾಮ ಗಾಯಗೊಂಡಿರುವುದು ತಿಳಿದುಬಂದಿದೆ. ಬಳಿಕ ಹೆಬ್ಬಾವಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ನಂತರ ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತಿಳಿದುಬಂದಿದೆ.