ಜೂಜು ರಹಿತ ಕೋಳಿ ಅಂಕಕ್ಕೆ ಅವಕಾಶ ನೀಡಿ: ಸರ್ಕಾರಕ್ಕೆ ವೇದಿಕೆ ಒತ್ತಾಯ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಸಾಂಪ್ರದಾಯಿಕ ಜೂಜು ರಹಿತ ಕೋಳಿ ಅಂಕಗಳಿಗೆ ಅವಕಾಶ ನೀಡುವಂತೆ ಜಿಲ್ಲೆಯ ಶಾಸಕರ ಜೊತೆ ಬೆಂಗಳೂರು ವಿಧಾನ ಸೌಧಕ್ಕೆ ತೆರಳಿ ರಾಜ್ಯ ಸರಕಾರಕ್ಕೆ ಒತ್ತಡವನ್ನು ಹಾಕಿದ್ದೇವೆ ಎಂದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಶಿವಣ್ಣ ಗೌಡ ಕಡಬ ತಿಳಿಸಿದ್ದಾರೆ.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಂಪ್ರದಾಯಿಕ ಕೋಳಿ ಅಂಕಗಳನ್ನು ನಡೆಸಲು ಅವಕಾಶ ನೀಡುವ ಸಲುವಾಗಿ ಜಿಲ್ಲೆಯ ರೈತರು ಸೇರಿಕೊಂಡು ಜಿಲ್ಲಾ ಮಟ್ಟದ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯನ್ನು ಮಾಡಿದ್ದೇವೆ,ಇದೀಗ ಪ್ರತಿ ತಾಲೂಕಿನಲ್ಲಿ ಇದರ ಸಮಿತಿಗಳನ್ನು ರಚಿಸಿಕೊಂಡು ಅ ಮೂಲಕ ಜಿಲ್ಲೆಯ ಧಾರ್ಮಿಕ ಆಚರಣೆಗಳ ಉಳಿವಿಗಾಗಿ ಹೋರಾಟ ಮಾಡಲು ಇನ್ನಷ್ಟು ಶಕ್ತಿಯನ್ನು ತುಂಬಲು ಮುಂದಾಗಿದ್ದೇವೆ. ಅ ನಿಟ್ಟಿನಲ್ಲಿ ಮಾ.24 ರಂದು ಮಂಗಳವಾರ ಬಂಟ್ವಾಳ ತಾಲೂಕಿನ ವಗ್ಗ ಕಾವಳಪಡೂರು ಸಮೃದ್ದಿ ಸಹಕಾರ ಸೌಧ ಸಭಾಂಗಣದಲ್ಲಿ ಸಮಿತಿಯ ಸಭೆಯನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದರು.

ಭೌಗೋಳಿಕವಾಗಿ ದ.ಕ.ಜಿಲ್ಲೆಯಲ್ಲಿ ಕೃಷಿ ಪ್ರಧಾನವಾಗಿ ಉಳಿದಿದ್ದು, ಧಾರ್ಮಿಕ ಆಚರಣೆಗಳ ಮೇಲೆ ಇಲ್ಲಿನ ಅರ್ಥಿಕ ವ್ಯವಸ್ಥೆ ನಿಂತಿದೆ. ಪರಶುರಾಮ ಸೃಷ್ಟಿ ತುಳುನಾಡಿನಲ್ಲಿ ಜಾತ್ರೆ,ನೇಮ,ಕೋಲ,ಕಂಬಳ,ಅಂಕ,ಆಯನ ಹೀಗೆ ಧಾರ್ಮಿಕ ಆಚರಣೆಗಳು ನಡೆಯುವುದು ಇಲ್ಲಿನ ಸಂಪ್ರದಾಯಿಕ ಪದ್ದತಿಯಾಗಿದೆ.ರೈತರು ಕೃಷಿಯ ಜೊತೆ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುವ ಪದ್ದತಿ ರಾಜರ ಆಡಳಿತ ಕಾಲದಿಂದಲೂ ರೂಡಿಯಾಗಿ ಬಂದಿತ್ತು. ಆದರೆ ಈ ವರ್ಷ ಮಾತ್ರ ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆಗಳ ಮೇಲೆ ಬಹುದೊಡ್ಡ ಪೆಟ್ಟು ಬಿದ್ದಿದ್ದು ಇಲ್ಲಿನ ಅರ್ಥಿಕ ವ್ಯವಸ್ಥೆಗೆ ಹೊಡೆತ ನೀಡಲಾಗಿದೆ ಎಂದು ಆರೋಪ ಮಾಡಿದರು.

ಗಣೇಶ ಚತುರ್ಥಿ, ಶಾರದಾ ಮಹೋತ್ಸವ, ಯಕ್ಷಗಾನ,ನಾಟಕ ಹೀಗೆ ಎಲ್ಲದರ ಮೇಲೂ ಸರಕಾರ ನಿರ್ಬಂಧ ಹೇರಿ ಜಿಲ್ಲೆಯ ಸೊಗಡನ್ನು ಬಲಿತೆಗೆದುಕೊಂಡಿದೆ ಎಂದು ಅರೋಪ ಮಾಡಿದರು.ಯಾವ ಜಿಲ್ಲೆಯಲ್ಲಿಯೂ ಇಲ್ಲದ ಕಠಿಣ ಕಾನೂನುಗಳು ದ.ಕ.ಜಿಲ್ಲೆಯಲ್ಲಿ ಹೇರಲಾಗಿದ್ದು, ಜನರ ಭಾವನೆಗಳ ಮೇಲೆ ಚೆಲ್ಲಾಟವಾಡುವ ಕಾರ್ಯ ಮಾಡುತ್ತಿದೆ ಎಂದು ಆರೋಪ ಮಾಡಿದರು. ಶ್ರೀಮಂತರ ಬೇರೆ ಬೇರೆ ಕ್ರೀಡೆಗಳಿಗೆ ಅವಕಾಶ ನೀಡುವ ಸರಕಾರ ಮತ್ತು ಅಧಿಕಾರಿಗಳು ಬಡವರ ಕ್ರೀಡೆಯಾದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಯಾಕೆ ನಿರ್ಬಂಧ ಹೇರಿದೆ.


ಜಿಲ್ಲೆಯ ಹೊರತು ಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಣಿ ಹಿಂಸೆಯೂ ನಡೆಯುತ್ತದೆ ,ಕೋಳಿ ಅಂಕ,ಕಂಬಳ, ಜಲ್ಲಿಕಟ್ಟು ಹೀಗೆ ನಾನಾತರದ ಜೂಜುಗಳ ಕ್ರೀಡೆಗಳು ಸಾರಾಗವಾಗಿ ನಡೆಯುತ್ತಿರಬೇಕಾದರೆ,ಜಿಲ್ಲೆಯ ಧಾರ್ಮಿಕ ಆಚರಣೆಯ ಜೊತೆಯಲ್ಲಿ ನಡೆಯುವ ಜೂಜು ರಹಿತವಾದ ಸಾಂಪ್ರದಾಯಿಕ ಕ್ರೀಡೆಯಾದ ಕೋಳಿ‌ ಅಂಕಗಳಿಗೆ ಅನುಮತಿ ನಿರಾಕರಣೆ ಮಾಡಿರುವ ಸರಕಾರ ಮತ್ತು ಅಧಿಕಾರಿಗಳ ಮನಸ್ಸು ಪರಿವರ್ತಿಸಿ ಅವಕಾಶ ನೀಡುವಂತೆ ಒತ್ತಾಯವನ್ನು ಮಾಡುವುದೇ ವೇದಿಕೆಯ ಉದ್ದೇಶವಾಗಿದೆ.ಪುರಾತನ ಕಾಲದಿಂದಲೂ ನಡೆಯುತ್ತಿದ್ದ ಸಾಂಪ್ರದಾಯಿಕ ಜೂಜುರಹಿತ ಕೇಪು ಕೋಳಿ ಅಂಕಕ್ಕೂ ಪೋಲೀಸರು ಅಡ್ಡಿಪಡಿಸುವ ಕಾರ್ಯ ಮಾಡಿದ್ದಾರೆ, ಪ್ರಕರಣ ಕೂಡ ದಾಖಲಿಸಿದ್ದಾರೆ.


ನಾವೆಲ್ಲರೂ ಮೌನವಾಗಿ ಕುಳಿತುಕೊಂಡರೆ ಮುಂದೊಂದು ದಿನ ಜಿಲ್ಲೆಯ ಬೇರೆ ಬೇರೆ ಧಾರ್ಮಿಕ ಕಾರ್ಯಕ್ರಮಗಳಿಗೂ ನಿರ್ಬಂಧ ಹೇರುವ ಇವರು ಸಮಯ ನಿಗದಿಪಡಿಸುವ ಕಾಲವೂ ಬರಬಹುದು.ಹಾಗಾಗಿ ಸಮಯ ಕೈ ಮೀರುವ ಮೊದಲೇ ನಾವೆಲ್ಲರೂ ಒಂದಾಗಿ ಇಲ್ಲಿನ‌ ಸಾಂಪ್ರದಾಯಿಕ ಆಚರಣೆಗಳ ಉಳಿವುಗಾಗಿ ಹೋರಾಟಮಾಡಬೇಕಾಗಿದೆ.
ಈಗಾಗಲೇ ಜಿಲ್ಲೆಯ ಎಲ್ಲಾ ಶಾಸಕರನ್ನು ಬೇಟಿಯಾಗಿ ಮನವಿ ಮಾಡಿದ್ದೇವೆ.ವಿಧಾನ ಸೌಧದ ಮೆಟ್ಟಿಲು ಹತ್ತಿ ಸತಕಾರದ ಗಮನ ಸೆಳೆದಿದ್ದೇವೆ. ವಿಧಾನ ಸಭೆಯ ಅಧಿವೇಶನದಲ್ಲಿ ಜಿಲ್ಲೆಯ ಶಾಸಕರುಗಳು ಈ ಬಗ್ಗೆ ಮಾತನಾಡುವುದಾಗಿಯೂ ಭರವಸೆ ನೀಡಿದ್ದಾರೆ.

ನಮಗೆ ವಿಶ್ವಾಸವಿದೆ, ಅತೀ ಶೀಘ್ರದಲ್ಲೇ ಜಿಲ್ಲೆಯ ಶಾಸಕರ ಮುಂದಾಳತ್ವದಲ್ಲಿ ಸರಕಾರದ ಮನವೊಲಿಸಿ ಜಿಲ್ಲೆಯ ಸಾಂಪ್ರದಾಯಿಕ ಪದ್ದತಿಯನ್ನು ಉಳಿಸುವ ದೃಷ್ಟಿಯಿಂದ ಜೂಜು ರಹಿತವಾದ ಕೋಳಿ ಅಂಕಗಳಿಗೆ ಅವಕಾಶವನ್ನು ಮಾಡಿಕೊಡುತ್ತಾರೆ. ಜಿಲ್ಲೆಯ ಜನರ ಸಹಕಾರದೊಂದಿಗೆ ಇಲ್ಲಿನ ಆಚಾರ ಮತ್ತು ವಿಚಾರಗಳಿಗೆ ಬೆಲೆ ನೀಡುವ ಕಾರ್ಯಗಳು ನಡೆಯುತ್ತವೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬೆಳ್ಳಿಯಪ್ಪ ಗೌಡ ಕಡಬ, ಆನಂದ ಪೂಜಾರಿ, ಗಂಗಾದರ ಪೂಜಾರಿ ಮತ್ತು ಹರಿದಾಸ ಕಾವಳಕಟ್ಟೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!