ಬಂಟ್ವಾಳ: ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳೂ ಪರಸ್ಪರ ದೂರು ನೀಡಿದ್ದು, ಕೌಂಟರ್ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪ ನಡು ಗ್ರಾಮದ ತಲೆಮೊಗರು ಮಸೀದಿ ಸಮೀಪ ಈ ಗಲಾಟೆ ನಡೆದಿದ್ದು, ಒಟ್ಟು 17 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಂಗಡಿಯೊಂದರಲ್ಲಿ ವ್ಯಾಪಾರ ನಡೆಸುತ್ತಿದ್ದ ವೇಳೆ ದಾವೂದ್ ಅವರ ತಂಡ ಬಂದು ಹಲ್ಲೆ ನಡೆಸಿದೆ ಎಂದು ಶೌಕತ್ ಆಲಿ ದೂರು ನೀಡಿದ್ದಾರೆ. ಸ್ಥಳೀಯ ನಿವಾಸಿಗಳಾದ ದಾವೂದ್, ಜುಬೈರ್, ಸೈದುದ್ದೀನ್, ನವಾಜ್, ಗಫೂರ್, ಶರೀಫ್, ಆಶಿಕ್, ಹೈದರ್, ಆಸೀಪ್, ಆಶ್ರಫ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ವೇಳೆ ಗಲಾಟೆ ಬಿಡಿಸಲು ಬಂದ ರಬಿಯತ್, ನಿಜಾಲ್, ಆಶ್ರಫ್, ಇಸಾಕ್, ಸಫಾನಾ ಮತ್ತು ಆಯಿಷಾ ಅವರಿಗೂ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಉಲ್ಲೇಖಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಅಬ್ದುಲ್ ನವಾಝ್ ಅವರು ಮತ್ತೊಂದು ದೂರು ನೀಡಿದ್ದು, ಶೌಕತ್, ಇಸಾಕ್, ಸಫಿಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸೀರ್ ಮತ್ತು ನಿಝಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. ದಾವೂದ್ ಹಾಗೂ ಅವರ ತಂಡ ಮಸೀದಿಗೆ ತೆರಳಿ ವಾಪಸು ಆಗುತ್ತಿದ್ದಾಗ ಶೌಕತ್ ಅವರ ತಂಡ ಮಸೀದಿ ಬಳಿ ತಡೆದು ಹಲ್ಲೆ ನಡೆಸಿ ಬೆದರಿಕೆ ಹಾಕಿದೆ ಎಂದು ಪ್ರತಿದೂರುದಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡೂ ತಂಡಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.