ಮಂಗಳೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅತ್ತಾವರದ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾರ್ಚ್ 22ರಂದು ದೇವಸ್ಥಾನದಲ್ಲಿ ನಡೆಯಿತು.
ಮಂಗಳೂರು ದಕ್ಷಿಣ ಶಾಸಕ Vedavyas Kamath ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಅಯ್ಯಪ್ಪ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವುದು ಪುಣ್ಯದ ಫಲವಾಗಿದ್ದು, ಇಂತಹ ದೇವತಾ ಕಾರ್ಯಗಳು ಊರಿನ ಉನ್ನತಿಗೆ ಕಾರಣವಾಗುತ್ತವೆ ಎಂದರು. ಬ್ರಹ್ಮಕಲಶ ನಡೆಯುವ ಊರಿಗೆ ಸಂಕಷ್ಟಗಳು ದೂರವಾಗುತ್ತವೆ ಎಂದು ಹೇಳಿ, ಈ ಮಹೋತ್ಸವದಲ್ಲಿ ಊರಿನ ಹಾಗೂ ಪರವೂರಿನ ಭಕ್ತರು ಎಲ್ಲರೂ ಭಾಗವಹಿಸಿ, ಅಳಿಲ ಸೇವೆಯ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಏಪ್ರಿಲ್ 19ರಿಂದ 23ರವರೆಗೆ ನಡೆಯಲಿರುವ ಈ ಬ್ರಹ್ಮಕಲಶೋತ್ಸವಕ್ಕೆ ಭಕ್ತರಲ್ಲಿ ಭಾರೀ ನಿರೀಕ್ಷೆ ವ್ಯಕ್ತವಾಗಿದೆ. ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ರತೀಂದ್ರನಾಥ್, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಸೂರಜ್ ರಾಘವನ್, ಕಾರ್ಯಾಧ್ಯಕ್ಷರಾದ ಗೋಕುಲದಾಸ್ ಮತ್ತು ಮುರುಳಿಧರ್, ಗೌರವ ಕೋಶಾಧಿಕಾರಿ ಸಂತೋಷ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ರಾಜರತ್ನ ಸನಿಲ್, ಗೌರವ ಕಾರ್ಯದರ್ಶಿ ಜನಾರ್ಧನ್ ಅತ್ತಾವರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಅಯ್ಯಪ್ಪ ದೇವಸ್ಥಾನ ಪಡೀಲ್ ಅಧ್ಯಕ್ಷ ಮೋಹನ್ ಪಡೀಲ್, ಆತ್ಮಶಕ್ತಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಚಿತ್ತರಂಜನ್, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಹಿತಿ ಹಾಗೂ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ರಘುವೀರ್ ಬಾಬುಗುಡ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.