ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ “ಕಾಸರಗೋಡು ಗೋ-ಕುಟೀರ” ಯೋಜನೆಯು ಮತ್ತೊಂದು ಮಹತ್ವದ ಹಂತವನ್ನು ತಲುಪಿದೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಈ ಯೋಜನೆಗೆ ವೇಗ ಸಿಕ್ಕಿದ್ದು, ಗೋಸೇವೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪುಗೊಂಡ ಈ ಕೇಂದ್ರವು ಸ್ಥಳೀಯ ಭಕ್ತರ ಗಮನ ಸೆಳೆಯುತ್ತಿದೆ. ಕಳೆದ ನವೆಂಬರ್ 4, 2025ರಂದು ಶಿವರಾಮ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯನ್ನು ಅಂಗವಾಗಿ, ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಅವರಿಂದ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತವಾಗಿ ಗೋ-ಮೇವು ಸಂಗ್ರಹಣಾಲಯ ಹಾಗೂ ಮೇಲ್ಚಾವಣಿ ನಿರ್ಮಾಣಕ್ಕೆ ಮಾರ್ಚ್ 24, 2026ರಂದು ಬೆಳಗಿನ ಶುಭ ಮುಹೂರ್ತದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಗಿದೆ.
ಈ ಕಾರ್ಯಕ್ರಮವನ್ನು ಕಾಸರಗೋಡಿನ ಧಾರ್ಮಿಕ ಮುಖಂಡ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವರಾಮ ಕಾಸರಗೋಡು ವಹಿಸಿದ್ದರು. ಈ ಸಂದರ್ಭದಲ್ಲಿ ಕಾಂಟ್ರಾಕ್ಟರ್ ಕಿರಣ ಕುಮಾರ್ ಬಿ.ಕೆ., ರಾಜೇಶ್ ಕುಮಾರ್ ಕೆ.ಬೀರಂತಬೈಲ್, ದೀಕ್ಷಿತ್ ಆಚಾರ್ಯ, ದೀಪಕ್ ಚಂದ್ರ ಕೆ., ಪ್ರಸಾದ್ ಕೇಳು ಗುಡ್ಡೆ, ಜಗದೀಶ್ ಕೇಳು ಗುಡ್ಡೆ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕರು, ಗೋ-ಪೋಷಕರು ಹಾಗೂ ಪ್ರಾಯೋಜಕರ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಈ ಗೋ-ಕುಟೀರವು ಕಾಸರಗೋಡು ಪ್ರದೇಶದಲ್ಲಿ ಗೋಭಕ್ತರ ಧಾರ್ಮಿಕ ಕೇಂದ್ರವಾಗುವ ನಿರೀಕ್ಷೆಯಿದೆ. ಇಲ್ಲಿ ಗೋಮೂತ್ರ, ಪಂಚಗವ್ಯ, ಗೋಮಯ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಭಕ್ತರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ, ಗೋಭಕ್ತರು ಗೋವುಗಳನ್ನು ದತ್ತು ಪಡೆದು ಒಂದು ವರ್ಷ ಅವುಗಳ ಪೋಷಣೆ ಮಾಡುವ ಮೂಲಕ ಗೋಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕೂಡ ನೀಡಲಾಗುತ್ತಿದೆ. ಈ ಯೋಜನೆ ಗೋಸಂರಕ್ಷಣೆ ಮತ್ತು ಧಾರ್ಮಿಕ ಸೇವೆಯನ್ನು ಸಮನ್ವಯಗೊಳಿಸುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.