ಕಾಸರಗೋಡು : ಮೊಗ್ರಾರ್ ಪುತ್ತೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಗುಂಪುಗೂಡಿ ಬರುವ ಬೀದಿ ನಾಯಿಗಳು ಈಗ ನೇರವಾಗಿ ಪಂಚಾಯತ್ ಕಚೇರಿಯ ಕಟ್ಟಡದೊಳಗೆಯೇ ಆಶ್ರಯ ಪಡೆಯುತ್ತಿವೆ. ನಾಯಿಗಳ ಹಾವಳಿ ತೀವ್ರವಾಗಿರುವ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಸಾರ್ವಜನಿಕ ಆಕ್ರೋಶದ ನಡುವೆಯೇ, ಸ್ವತಃ ಪಂಚಾಯತ್ ಕಚೇರಿಯೇ ಬೀದಿ ನಾಯಿಗಳ ಆವಾಸಸ್ಥಾನವಾಗಿ ಮಾರಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಪಂಚಾಯತ್ ಕಚೇರಿಯ ಸಮೀಪವಿರುವ ಶಾಲೆ, ಮದ್ರಸಾ ಹಾಗೂ ಕೆಲಸದ ನಿಮಿತ್ತ ನಡೆದಾಡುವ ಸಾರ್ವಜನಿಕರು ಈ ನಾಯಿಗಳ ಗುಂಪಿಗೆ ಭಯಪಟ್ಟುಕೊಂಡೇ ಜೀವ ಭಯದೊಂದಿಗೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಮ್ಮ ಮಕ್ಕಳ ಬಗ್ಗೆ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದು, ನಾಯಿಗಳ ಈ ಹಿಂಡು ಯಾವಾಗ ದಾಳಿ ಮಾಡುತ್ತದೆ ಎಂಬುದು ಯಾರೂ ಹೇಳಲಾಗದ ಸ್ಥಿತಿಯಿದೆ.

ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ, ಪಂಚಾಯತ್ ಕಚೇರಿಯೊಳಗೆ ನಡೆಯುತ್ತಿರುವ ಬೀದಿ ನಾಯಿಗಳ ಈ ‘ಸುಖವಾಸ’ವನ್ನು ಕೂಡಲೇ ಅಂತ್ಯಗೊಳಿಸಬೇಕೆಂದು ಸ್ಥಳೀಯರು ಕಳಕಳಿಯಿಂದ ಒತ್ತಾಯಿಸಿದ್ದಾರೆ.

