ಪುತ್ತೂರು: ಸ್ಥಳೀಯ ಗ್ರಾಹಕರನ್ನು ಪುತ್ತೂರಿನಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಪ್ರಥಮ ಬಾರಿಗೆ ಆಯೋಜಿಸಿರುವ ‘ಪುತ್ತೂರು ಶಾಪಿಂಗ್ ಹಬ್ಬ’ದ ಮೆಗಾ ಡ್ರಾ ಮಾ.29ರಂದು ಸಂಜೆ 5.30ಕ್ಕೆ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಶಾಪಿಂಗ್ ಹಬ್ಬದ ಅಂಗವಾಗಿ ವಿವಿಧ ವಾಣಿಜ್ಯ ಮಳಿಗೆಯಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ಗಿಫ್ಟ್ ಕೂಪನ್ಗಳನ್ನು ವಿತರಿಸಲಾಗಿದ್ದು, ಕಳೆದ 8 ವಾರಗಳಿಂದ ಪ್ರತಿ ವಾರ ಕೂಪನ್ ಡ್ರಾ ನಡೆಸಿ 5ಜಿ ಮೊಬೈಲ್ ಫೋನ್ ಸೇರಿದಂತೆ 80ಕ್ಕೂ ಹೆಚ್ಚು ಸಮಾಧಾನಕರ ಬಹುಮಾನಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಇದೀಗ ಅಂತಿಮ ಮೆಗಾ ಡ್ರಾವನ್ನು ವರ್ತಕ ಸಂಘದ ಕುಟುಂಬ ಸಮ್ಮಿಲನ ಕಾರ್ಯಕ್ರಮದೊಂದಿಗೆ ಆಯೋಜಿಸಲಾಗುತ್ತಿದೆ. ಮೆಗಾ ಬಂಪರ್ ಬಹುಮಾನವಾಗಿ ಮಾರುತಿ ಆಲ್ಟೊ, ಜೊತೆಗೆ ಬೈಕ್, ಫ್ರಿಜ್ ಹಾಗೂ ಆಂಡ್ರಾಯ್ಡ್ ಟಿವಿ ಸೇರಿದಂತೆ ಅನೇಕ ಆಕರ್ಷಕ ಬಹುಮಾನಗಳನ್ನು ಅದೃಷ್ಟಶಾಲಿ ಗ್ರಾಹಕರು ಪಡೆಯಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಅಧ್ಯಕ್ಷ ಪಿ.ಬಿ. ಅಹಮ್ಮದ್ ಮುದಸ್ಸರ್, ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನ ಮಾಲಕ ಬಲರಾಮ ಆಚಾರ್ಯ ಹಾಗೂ ಸೋಜಾ ಅಲ್ಯೂಮಿನಿಯಂ ಮಾಲಕ ಗಿಲ್ಬರ್ಟ್ ಡಿಸೋಜ ಭಾಗವಹಿಸಲಿದ್ದಾರೆ.
ಪುತ್ತೂರಿನ ಸುತ್ತಮುತ್ತ ಸುಮಾರು 120 ಮಳಿಗೆಗಳಲ್ಲಿ ಕೂಪನ್ಗಳನ್ನು ವಿತರಿಸಲಾಗಿದ್ದು, ಸುಮಾರು 70,000 ಗ್ರಾಹಕರಿಗೆ ಇದರ ಲಾಭ ತಲುಪಿದೆ. ಈ ಯೋಜನೆಗೆ ಸ್ಪಂದಿಸಿದ ವರ್ತಕರು ಮತ್ತು ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಲಾಗಿದ್ದು, ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಉಪಾಧ್ಯಕ್ಷ ಮನೋಜ್ ಟಿ.ವಿ, ಎಂ.ಜಿ. ಅಬ್ದುಲ್ ರಫೀಕ್, ಕೋಶಾಧಿಕಾರಿ ಜಾನ್ ಕುಟೀನಾ ಹಾಗೂ ಸಂಚಾಲಕ ಶಶಿರಾಜ್ ರೈ ಉಪಸ್ಥಿತರಿದ್ದರು.