ಕಿನ್ನಿಗೋಳಿ: ತುಳುನಾಡಿನ ನಂಬಿಕೆ ಅನನ್ಯ. ದೈವವನ್ನು ಪ್ರೀತಿಪೂರ್ವಕವಾಗಿ ನಂಬಿದರೆ ಅವು ನಮ್ಮನ್ನು ಅಷ್ಟೇ ಪ್ರೀತಿಯಿಂದ ಕೈ ಹಿಡಿಯುತ್ತದೆ. ಅದಕ್ಕೆ ಅನೇಕ ನಿದರ್ಶನಗಳಿವೆ. ಯಾವುದೇ ಕಾರಣಕ್ಕೂ ನಮ್ಮ ಮೂಲ ಸಂಪ್ರದಾಯವನ್ನು ಮರೆಯಬಾರದು ಎಂದು ಕೊಡೆತ್ತೂರು ಗಡಿ ಪ್ರಧಾನರಾದ ನಿತಿನ್ ಶೆಟ್ಟಿ ಹೇಳಿದರು.ತುಲುವೆರೆ ಕಲ(ರಿ.) ಮಂಗಳೂರು ವತಿಯಿಂದ ಭಾನುವಾರ ಗುತ್ತಿನ ಚಾವಡಿಯಲ್ಲಿ ನಡೆದ ‘ಗುತ್ತುಗೊಂಜಿ ಕಲೊತ ಸುತ್ತು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಸಂಸ್ಕೃತಿಯಲ್ಲಿ ಗುತ್ತುಗಳ ಪಾತ್ರ ಅಪಾರ. ದೇವಳಗಳಲ್ಲಿರುವ ಶಿಷ್ಟಾಚಾರ ಗುತ್ತಿನ ಮನೆಗಳಿಗೂ ಅನ್ವಯ. ವಿಶ್ವಾದ್ಯಂತ ಅನೇಕ ಖ್ಯಾತನಾಮರನ್ನು ಹೊಂದಿರುವ ಗುತ್ತಿನಲ್ಲಿ ಪ್ರಸ್ತುತ ಇರುವವರು ಕೆಲವೇ ಮಂದಿ. ಅದು ಈಗಿನ ಅನಿವಾರ್ಯತೆಯೂ ಹೌದು. ಆದರೆ ನಮ್ಮ ಅನುಷ್ಠಾನವನ್ನು ಮುಂದುವರಿಸುತ್ತಿದ್ದೇವೆ. ಅದರಲ್ಲಿ ಸಾರ್ಥಕ್ಯ ಭಾವವಿದೆ ಎಂದರು.
ಜಾನಪದ ಚಿಂತಕ ಹಾಗೂ ದೈವಾರಾಧನಾ ಸಂಶೋಧಕ ವಿಜೇತ್ ಎಂ.ಶೆಟ್ಟಿ ಮಂಜನಾಡಿ ‘ತುಲುವೆರೆ ಗುತ್ತುದ ಪೊರ್ಲು: ಸಂಸ್ಕೃತಿ-ಬದ್ಕ್ಗೊಂಜಿ ತಿರ್ಲ್’ ಕುರಿತು ಉಪನ್ಯಾಸ ನೀಡಿದರು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸದಸ್ಯ ದಾಮೋದರ್ ಶೆಟ್ಟಿ, ತುಲುವೆರೆ ಕಲ ಗೌರವಾಧ್ಯಕ್ಷ ಮುದ್ದು ಮೂಡುಬೆಳ್ಳೆ. ಜೈ ತುಲುನಾಡು ನಿಕಟಪೂರ್ವ ಅಧ್ಯಕ್ಷ ಉದಯ ಪೂಂಜ, ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಮಾತನಾಡಿದರು.
ಸದಾನಂದ ನಾರಾವಿ, ಸವಿತಾ ಕರ್ಕೇರ ಕಾವೂರು, ಸೌಮ್ಯಾ ಆರ್ ಶೆಟ್ಟಿ ಮಂಜೇಶ್ವರ, ಅನುರಾಧಾ ರಾಜೀವ್ ಸುರತ್ಕಲ್, ಪದ್ಮನಾಭ ಸುವರ್ಣ ಮಿಜಾರ್, ಪದ್ಮನಾಭ ಪೂಜಾರಿ ಬಂಟ್ವಾಳ, ಆರ್ಯನ್ ಸವಣಾಲ್, ರವೀಂದ್ರ ಕುಲಾಲ್ ವರ್ಕಾಡಿ, ಶಶಿಕಲಾ ಭಾಸ್ಕರ್ ದೈಲಾ, ಮಲ್ಲಿಕಾ ಜೆ.ರೈ.ಪುತ್ತೂರು, ಮುರಳೀಧರ್ ಆಚಾರ್ಯ, ವಿಶ್ವನಾಥ ಕುಲಾಲ್ ಮಿತ್ತೂರು, ಅಶೋಕ ಎಂ.ಕಡೇಶಿವಾಲಯ, ನಿಶಾನ್ ಅಂಚನ್, ಹಂಸರಾಗ ಶೆಟ್ಟಿ, ಚಂದ್ರಹಾಸ ಕುಂಬಾರ ಬಂದಾರು, ವೈಭವ್ ಡಿ. ಶೆಟ್ಟಿಗಾರ್, ಗ್ರೀಷ್ಮಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ತುಲುವೆರೆ ಕಲ ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ ಪ್ರಾರ್ಥಿಸಿದರು. ಸಹ ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಕುಂಬಾರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ದೋಟ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ತುಳುನಾಡಿನ ಒಟ್ಟು ಸಂಸ್ಕೃತಿಯ ಕೈಗನ್ನಡಿ ಇಲ್ಲಿನ ಗುತ್ತುಗಳು. ಎಲ್ಲ ಜೀವಜಂತುವಿನಲ್ಲೂ ನಾಯಕತ್ವದ ಪರಂಪರೆಯಿದೆ. ಅದು ಜೀವಂತ ಪ್ರಕ್ರಿಯೆ. ಮಾತೃ ಸಂಸ್ಕೃತಿಯ ಪರಿಪೂರ್ಣ ಕೈಗನ್ನಡಿಯಾಗಿಯೂ ಗುತ್ತುಗಳು ಉದಾಹರಣೆಯಾಗಿವೆ. ಗುತ್ತುಗಳ ಸ್ಥಿತ್ಯಂತರಕ್ಕೆ ಭೂಮಸೂದೆ ಕಾಯ್ದೆಯೂ ಕಾರಣ. ಇಂದಿಗೂ ಗುತ್ತುಗಳು ತುಳುನಾಡಿನ ಐತಿಹ್ಯವನ್ನು ಹೊತ್ತು ಸಾಗುತ್ತಿವೆ.
| ವಿಜೇತ್ ಎಂ.ಶೆಟ್ಟಿ, ಮಂಜನಾಡಿ, ಜಾನಪದ ಚಿಂತಕ
ಸಾಹಿತ್ಯ ಕ್ಷೇತ್ರಕ್ಕೂ ಕೊಡೆತ್ತೂರು ಗ್ರಾಮದ ಕೊಡುಗೆ ಇದೆ. ದಿ.ಕೋ.ಅ.ಉಡುಪರಿಂದ ಆರಂಭವಾದ ‘ಯುಗಪುರುಷ’ 75 ವರ್ಷಗಳಿಂದ ಪ್ರಕಟವಾಗುತ್ತಿರುವ ಕನ್ನಡದ ಪ್ರತಿಷ್ಠಿತ ಮಾಸ ಪತ್ರಿಕೆ. ಗೋಕಾಕ ಚಳವಳಿ ಸಂದರ್ಭ ತುಳುನಾಡಿನ ಧ್ವನಿಯನ್ನು ಅದು ಸಮರ್ಥವಾಗಿ ಪ್ರತಿಬಿಂಬಿಸಿತ್ತು. ಎರಡು ಪದ್ಮ ಪ್ರಶಸ್ತಿ ಪಡೆದ ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಗ್ರಾಮವಿದು. ದೇಶದ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ, ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಹಾಗೂ ಭಾರತದ ಖ್ಯಾತ ಶಸ್ತ್ರಚಿಕಿತ್ಸಕ, ವೈದ್ಯಕೀಯ ಶಿಕ್ಷಣ ತಜ್ಞ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ(ಬಿಎಚ್ಯು) ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಸ್ಥಾಪಕ ನಿರ್ದೇಶಕ ಡಾ.ಕೆ.ಎನ್.ಉಡುಪ ಈ ಗ್ರಾಮದ ಖ್ಯಾತಿಯನ್ನು ಉತ್ತುಂಗಕ್ಕೇರಿಸಿದ್ದಾರೆ.
| ದಾಮೋದರ್ ಶೆಟ್ಟಿ, ಸದಸ್ಯ, ಪಟ್ಟಣ ಪಂಚಾಯಿತಿ, ಕಿನ್ನಿಗೋಳಿ
‘ತುಲುವೆರೆ ಕಲ’ ಆಯೋಜಿಸಿದ ಈ ಕಾರ್ಯಕ್ರಮ ಅತ್ಯಂತ ಸಂದರ್ಭೋಚಿತ. ಸದಾ ಕಾಲ ನೆನಪಿನಲ್ಲಿ ಉಳಿಯುವ ಈ ಕಾರ್ಯಕ್ರಮದ ಮೂಲಕ ‘ತುಲುವೆರೆ ಕಲ’ ವೈಶಿಷ್ಟ್ಯವನ್ನು ಮೆರೆದಿದೆ. ಇದನ್ನು ಅರ್ಥಪೂರ್ಣವಾಗಿ ಸಂಘಟಿಸಿದ ಸದಸ್ಯರು ಪ್ರಶಂಸಾರ್ಹರು. ಇಂತಹ ಕಾರ್ಯಕ್ರಮಗಳು ಇಂದಿನ ಅಗತ್ಯ. ಮುಂದುವರಿಯಲಿ.
| ಉದಯ ಪೂಂಜ, ತಾರಿಪಾಡಿಗುತ್ತು, ನಿಕಟಪೂರ್ವ ಅಧ್ಯಕ್ಷ