ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೋತ್ಸವದ ಪೂರ್ವಭಾವಿ ಸಭೆ – ಭಾರಿ ಸಿದ್ಧತೆ

ಪುತ್ತೂರು; ಪುತ್ತೂರು ಮಹತೋಬಾರ ಪುತ್ತೂರು ಮಹಾಲಿಂಗೇಶ್ವರದ ದೇವಳದ ಜಾತ್ರೋತ್ಸವವು ಎ.10-20 ತನಕ ನಡೆಯಲಿದ್ದು, ಜಾತ್ರೆಯ ಯಶಸ್ವಿಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಬಾವಿ ಸಭೆಯು ದೇವಳದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ರೈ ಅವರು ಮಾತನಾಡಿ, ಜಾತ್ರೋತ್ಸವಕ್ಕೆ ಎರಡು ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದ್ದು, ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಿರ್ವಹಿಸಲು ಇಲಾಖೆಗಳ ಸಹಭಾಗಿತ್ವ ಅಗತ್ಯವಿದೆ. ವಿವಿಧ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ಮಹಾರಥೋತ್ಸವ ಎ.17ರಂದು ಮಹಾರಥ ಎಳೆಯುವ ಸಂದರ್ಭ ಮತ್ತು ವೀರಮಂಗಳಕ್ಕೆ ದೇವರು ಜಳಕಕ್ಕೆ ಹೋಗುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದಂತೆ ಹೆಚ್ಚಿನ ಎಚ್ಚರವಹಿಸಬೇಕು. ಜಾತ್ರೆಯ ಸಮರ್ಪಕ ನಿರ್ವಹಣೆಗಾಗಿ ಈಗಾಗಲೇ ಜಾತ್ರಾಅಂಗಣವನ್ನು ಸಾಕಷ್ಟು ವಿಸ್ತರಣೆ ಮಾಡಲಾಗಿದೆ. ಪ್ರತೀ ದಿನ 25 ಸಾವಿರ ಮಂದಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ದೇವರ ಅವಭೃತಸ್ನಾನಕ್ಕೆ ವೀರಮಂಗಲದಲ್ಲಿ ಭಕ್ತ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.ಅಲ್ಲಿ ತಡೆಗೋಡೆ, ಗ್ಯಾಲರಿ, ತಾತ್ಕಾಲಿಕ ಶೌಚಾಲಯ ವ್ಯವಸ್ಥಿತ ರೀತಿಯಲ್ಲಿ ಮಾಡಲಾಗುವುದು ಎಂದರು.

ಜಾತ್ರಾ ಗದ್ದೆಯಲ್ಲಿ 350 ಸ್ಟಾಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ದೇವರ ಹುಂಡಿಗೆ ಸುಮಾರು 1 ಕೋಟಿ ಹಣ ಸೇರ್ಪಡೆಯಾಗಲಿದೆ. ಸ್ಟಾಲ್ ಏಲಂ ಪ್ರಕ್ರಿಯೆಯಲ್ಲಿ ಒಳೊಪ್ಪಂದಗಳಿಗೆ ಯಾವುದೇ ಅವಕಾಶ ಇಲ್ಲ. ಪ್ರತಿಯೊಬ್ಬರೂ ವೈಯುಕ್ತಿಕ ಏಲಂನಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದ ಅವರು ಇದರೊಂದಿಗೆ ದೇವಳದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ಸಂಗ್ರಹಕ್ಕೆ ಪ್ರತ್ಯೇಕ ಕಚೇರಿ ತೆರೆಯಲಾಗುತ್ತಿದ್ದು, ರೂ.2 ಕೋಟಿ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ದೇವರ ಕಟ್ಟೆಪೂಜೆಗೆ ವಿಚಾರದ ಬಗ್ಗೆ ತಿಳಿಸಿದ ಅವರು ತಾತ್ಕಾಲಿಕ ಕಟ್ಟೆಗಳಲ್ಲಿ ಪೂಜೆಗೆ ಅವಕಾಶ ಇಲ್ಲ. ಹೊಸ ಕಟ್ಟೆಗೆ ಅನುಮತಿ ಇಲ್ಲ. 152 ಶಾಶ್ವತ ಕಟ್ಟೆಗಳಲ್ಲಿ ಮಾತ್ರ ಕಟ್ಟೆಪೂಜೆ ನಡೆಸಲು ಅವಕಾಶ ಇರುತ್ತದೆ ಎಂದರು.
ಸಭೆಯಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಬಂದೋಬಸ್ತು, ಸಂಚಾರಿ ವ್ಯವಸ್ಥೆ, ಶುಚಿತ್ವ ಮತ್ತು ನೀರು ಸಿಂಪಡಣಾ ವ್ಯವಸ್ಥೆ, ತಾತ್ಕಾಲಿಕ ಕ್ಲಿನಿಕ್, ನಿರಂತರ ವಿದ್ಯುತ್ ಸರಬರಾಜು, ಜಿಲ್ಲೆಯ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ಸೌಕರ್ಯ, ಸುರಕ್ಷತೆ ಹಿನ್ನಲೆಯಲ್ಲಿ ಅಗ್ನಿಶಾಮಕದಳ ಮತ್ತು ನೀರಿನ ಟ್ಯಾಂಕರ್ ಕಲ್ಪಿಸುವುದು ಹಾಗೂ ರಥದ ಪರಿಶೀಲನೆ ಮತ್ತು ದೃಢೀಕರಣ ಪತ್ರ ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್,ಸದಸ್ಯ ಮಹಾಬಲ ರೈ ಅರಿಯಡ್ಕ,ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್, ತಹಶೀಲ್ದಾರ್ ಎಸ್.ಬಿ.ಕೂಡಲಗಿ, ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಕುಲಾಲ್ ಪಿ.ವಿ, ಈಶ್ವರ ಬೇಡೇಕರ್, ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ವಿನಯ ಸುವರ್ಣ, ದೇವಳದ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!