ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ಶೈವಾಂಶವಾದ ವಯನಾಟು ಕುಲವನ್ ಶತ ವರುಷಗಳ ವಿರಾಮದ ನಂತರ ದರ್ಶವನ್ನು ನೀಡಿತ್ತು . ಈ ದೈವ ಆಚರಣೆಯು ಅಪರೂಪದಲ್ಲಿ ಅಪರೂಪವಾಗಿದೆ . ಈ ಸಂದರ್ಭದಲ್ಲಿ ವಯನಾಟು ಕುಲವನ್ ದೈವದ ಐತಿಹ್ಯ ಈ ಪ್ರಕಾರವಾಗಿದೆ .
ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿ ಬೇಡರ ವೇಷದಲ್ಲಿ ಕಾಡಿನಲ್ಲಿ ಬೇಟೆಯಾಡುತ್ತ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆಗಳು ನಡೆದವು. ಒಂದು ವೇಳೆ ಶಿವನು ಪಾರ್ವತಿಯತ್ತ ಆಕರ್ಷಿತನಾದರೂ, ಪಾರ್ವತಿ ನಿರಾಕರಿಸಿದಳು. ಈ ಸಂದರ್ಭ ಶಿವನ ದೇಹದ ದ್ರವ ನೆಲಕ್ಕೆ ಬೀಳುತ್ತಿದ್ದಂತೆ ‘ತೆನ್ಮಕಲ್’, ‘ಕರಿಮಕಲ್’ ಮತ್ತು ‘ತಿರುಮಕಲ್’ ಎಂಬ ಮೂರು ವೃಕ್ಷಗಳು ಹುಟ್ಟಿಕೊಂಡವು.
ಈ ಮರಗಳಲ್ಲಿ ತೆನ್ಮಕಲ್ ಮರದಿಂದ ಮಧು ಹರಿಯತೊಡಗಿತು. ಶಿವನು ಅದನ್ನು ಸೇವಿಸಿ ಮದ್ಯಮತ್ತನಾಗಿ “ಶಿವ ತಾಂಡವ”ದಲ್ಲಿ ತೊಡಗಿದ್ದನು. ಇದರಿಂದ ಚಿಂತಿತಳಾದ ಪಾರ್ವತಿ, ಕಲ್ಪವೃಕ್ಷದಿಂದ ಹರಿಯುತ್ತಿದ್ದ ಮಧುವನ್ನು ನಿಲ್ಲಿಸುವ ಮೂಲಕ ಶಿವನನ್ನು ತಡೆಯಲು ಯತ್ನಿಸಿದಳು.
ಮಧು ದೊರೆಯದ ಕಾರಣ ಕೋಪಗೊಂಡ ಶಿವನು ತನ್ನ ತೊಡೆಯ ಮೇಲೆ ಹೊಡೆದುಕೊಂಡಾಗ, ಆದಿದಿವ್ಯನ್ ಎಂಬ ದಿವ್ಯ ಶಕ್ತಿ ಜನಿಸಿತು. ಶಿವನು ಆತನಿಗೆ ಮಧು ಸಂಗ್ರಹಿಸುವ ಜವಾಬ್ದಾರಿ ನೀಡಿದನು. ಆದರೆ, ಶಿವನ ನಿರಂತರ ಮದ್ಯಪಾನದಿಂದ ಬೇಸರಗೊಂಡ ಪಾರ್ವತಿ, ವಿಷ್ಣುನ ಸಹಾಯದಿಂದ ಆದಿದಿವ್ಯನ್‌ನ್ನು ದೇವಲೋಕದಿಂದ ಗಡಿಪಾರು ಮಾಡಿಸಿದಳು.
ಭೂಮಿಗೆ ಬಂದ ಆದಿದಿವ್ಯನ್ “ವಯನಾಟು ಕುಲವನ್” ಎಂಬ ಹೆಸರಿನಲ್ಲಿ ಪ್ರಸಿದ್ಧನಾದನು. ಕುಟುಂಬದ ಹಿರಿಯ ಎಂಬ ಅರ್ಥವನ್ನು ಕುಲವನ್, ತೊಂಡಚ್ಚನ್ ನೀಡುತ್ತದೆ .
ಶಿವನ ಭಕ್ತೆಯಾಗಿದ್ದ ನೀಲಿಮಾದತಿಂಗಲ್ ತಮ್ಮರಸ್ಸೇರಿಯಮ್ಮನಿಗೆ ಪುತ್ರನಾಗಿ ಜನಿಸಿದ ಕುಲವನ್, ಬೇಟೆ ಮತ್ತು ಮದ್ಯಪಾನದಲ್ಲಿ ತೊಡಗಿದ್ದನು. ಒಂದು ಸಂದರ್ಭದಲ್ಲಿ ಶಿವನಿಗಾಗಿ ಸಂರಕ್ಷಿಸಲ್ಪಟ್ಟಿದ್ದ ಅಷ್ಟ ಮಧುಕಲಶದಿಂದ ಮಧು ಕುಡಿಯಲು ಯತ್ನಿಸಿದಾಗ, ಶಿವನು ರುದ್ರ ರೂಪದಲ್ಲಿ ಕಾಣಿಸಿಕೊಂಡು ಅವನಿಗೆ ಕುರುಡತನದ ಶಾಪ ನೀಡಿದನು.
ನಂತರ ಕುಲವನ್ ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟಾಗ, ಶಿವನು ಅವನಿಗೆ ಬೆಳ್ಳಿಯ ಕಣ್ಣುಗಳು ಹಾಗೂ ಬಿದಿರಿನ ಸೂಟೆ ನೀಡಿದನು. ಆದರೆ ದೃಷ್ಟಿ ಸಿಗದ ಕಾರಣ ಕುಲವನ್ ಕೋಪಗೊಂಡು ಅವುಗಳನ್ನು ದೂರ ಎಸೆದನು. ಈ ಸಂದರ್ಭ ಅವನು ದಿವ್ಯಶಕ್ತಿಯನ್ನು ಪಡೆದುಕೊಂಡನೆಂದು ಪೌರಾಣಿಕ ನಂಬಿಕೆ ಇದೆ.
ಈ ಹಿನ್ನೆಲೆಯಲ್ಲಿ ವಯನಾಟು ಕುಲವನ್‌ನ್ನು ವಿಶೇಷವಾಗಿ ಹಿಂದೂ ಥಿಯಾ ಸಮುದಾಯದವರು ತಮ್ಮ ಕುಟುಂಬದ ಹಿರಿಯ ದೈವವಾಗಿ ಪೂಜಿಸುತ್ತಿದ್ದಾರೆ. ವಯನಾಡಿನಲ್ಲಿ ದಿವ್ಯಶಕ್ತಿ ಪಡೆದ ಕಾರಣವೇ “ವಯನಾಟು ಕುಲವನ್” ಎಂಬ ಹೆಸರು ಬಂದಿದೆಯೆಂದು ಭಕ್ತರು ನಂಬುತ್ತಾರೆ.ಮುಂದೆ ಈ ದೈವವು ಉತ್ತರ ಕೇರಳ ಭಾಗಕ್ಕೆ ಸಂಚಾರ ಮಾಡಿತ್ತು . ಆ ದೈವವು ಯಾವೆಲ್ಲಾ ಭಾಗಗಳಲ್ಲಿ ಆಶ್ರಯವನ್ನು ಪಡೆದಿದೆಯೋ ಅಲ್ಲಿ ತರವಾಡು ಮನೆಗಳು ಸ್ಥಾಪನೆಯಾಗಿದೆ ಎಂದು ಐತಿಹ್ಯ ಕಥೆಗಳು ತಿಳಿಸುತ್ತದೆ .
ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವದ ಝಲಕ್ ಇಲ್ಲಿದೆ .
ಗಿರೀಶ್ ಪಿ ಎಂ , ಕಾಸರಗೋಡು