ಕುಲಶೇಖರ ಪದವು ಶ್ರೀ ಶನೈಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ನಗರದ ಪದವು ಕುಲಶೇಖರದಲ್ಲಿ ಹಿಂದು ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಶನೈಶ್ವರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಏಪ್ರಿಲ್ 18 ರಿಂದ 24 ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಅವರು ದೇವಾಲಯದ ಆವರಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ವೇದಮೂರ್ತಿ ಎಂ. ಗಿರಿಧರ ಭಟ್ ಮತ್ತು ವೇದಮೂರ್ತಿ ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಏಪ್ರಿಲ್ 18 ರಂದು ಶನಿವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದೆ. 108 ಕಾಯಿ ಗಣಯಾಗ, ರುದ್ರಯಾಗ ಹಾಗೂ ಏಪ್ರಿಲ್ 22 ರವರೆಗೆ ಲಕ್ಷ್ಮೀನಾರಾಯಣ ಪ್ರಧಾನ ಹೋಮ ನಡೆಯಲಿದ್ದು, ಏಪ್ರಿಲ್ 23 ರಂದು ಗಣಪತಿ, ದುರ್ಗಾ, ನವಗ್ರಹ ಸಹಿತ ಶ್ರೀ ಶನೈಶ್ವರ ದೇವರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಎಪ್ರಿಲ್ 24 ರಂದು ಚಂಡಿಕಾಯಾಗ ಮತ್ತು ಸಮಗ್ರ ಶನೈಶ್ವರ ಮಹಾಯಾಗದೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ ಎಂದರು .

ಉತ್ಸವದ ಅಂಗವಾಗಿ ಏಪ್ರಿಲ್ 19 ರಂದು ಬೆಳಿಗ್ಗೆ 9 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಪದವು ದೇವಸ್ಥಾನದವರೆಗೆ ಹಸಿರುವಾಣಿ (ಹೊರೆಕಾಣಿಕೆ) ಮೆರವಣಿಗೆ ನಡೆಯಲಿದ್ದು, ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಚಾಲನೆ ನೀಡಲಿದ್ದಾರೆ. ಅಂದು ಸಂಜೆ ಶಿವಾಜಿ ಮಂಟಪದಲ್ಲಿ ಹಿಂದು ಯುವಸೇನೆಯ ಸಮಾವೇಶ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಯಕ್ಷಗಾನ, ನಾಟಕ ಹಾಗೂ ಸಂಗೀತ ಲಹರಿಗಳು ಪ್ರದರ್ಶನಗೊಳ್ಳಲಿವೆ ಎಂದರು .

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ , ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಶನೈಶ್ವರ ಸಹಿತ ಉಪ ದೇವರನ್ನು ಒಳಗೊಂಡ ದೇವಾಲಯ ಎನ್ನುವ ಹೆಗ್ಗಳಿಕೆ ಪಾತ್ರವಾಗಲಿದೆ . ದೇವಾಲಯದಲ್ಲಿ ವಿವಿಧ ದಿನಗಳಲ್ಲಿ ಅನೇಕ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಸಂದರ್ಭದಲ್ಲಿ ಹಿಂದೂ ಯುವಸೇನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ ಬಾಸ್ಕರ ಚಂದ್ರ ಶೆಟ್ಟಿ, ಶನಿಶ್ವರ ಪೂಜಾ ಸಮಿತಿ ಅದ್ಯಕ್ಷರಾದ ರಾಮಚಂದ್ರ ಚೌಟ, ಮಾತೃಮಂಡಳಿ ಅಧ್ಯಕ್ಷರಾದ ವಿಜಯ ಅರುಣ್, ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ ಮತ್ತು ಉಮೇಶ್ ರೈ ಸಹಿತ ಮತ್ತಿತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!