ಕಟೀಲು ಜಾತ್ರೋತ್ಸವದ ತೂಟೆದಾರ ಆಚರಣೆ ಭಕ್ತರಲ್ಲಿ ರೋಮಾಂಚನ

ಮಂಗಳೂರು: ಮಂಗಳೂರಿನ ಸಮೀಪದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವದ ಕೊನೆಯ ದಿನ ‘ತೂಟೆದಾರ’ ಆಚರಣೆ ಭಕ್ತರಲ್ಲಿ ಅಪಾರ ರೋಮಾಂಚನ ಮೂಡಿಸಿತು.

ಎರಡು ತಂಡಗಳು ಒಂದರ ಮೇಲೊಂದು ಉರಿಯುತ್ತಿರುವ ಬೆಂಕಿ ಕೊಳ್ಳಿಗಳನ್ನು ಎಸೆಯುತ್ತಾ ರಣರೋಚಕ ದೃಶ್ಯವನ್ನು ಸೃಷ್ಟಿಸಿತು. ರಾಶಿರಾಶಿಯಾಗಿ ಹಾರಾಡುವ ಬೆಂಕಿ ಪಂಜುಗಳು ಹಾಗೂ ದಟ್ಟ ಹೊಗೆ ನಡುವೆ ರಥಬೀದಿ ರಣರಂಗದಂತಾಗಿ ಕಾಣಿಸಿಕೊಂಡಿತು. ಈ ಅಪರೂಪದ ದೃಶ್ಯವನ್ನು ನೋಡಲು ನೆರೆದಿದ್ದ ಭಕ್ತರು ಕಣ್ಣೆವೆಯಿಕ್ಕದೆ ಗಮನಿಸಿ ಬೆಕ್ಕಸಬೆರಗಾದರು.

ಜಾತ್ರೆಯ ಪ್ರಮುಖ ಆಕರ್ಷಣೆಯಾದ ತೂಟೆದಾರವು ಪ್ರತಿವರ್ಷ ಏಪ್ರಿಲ್ ಹದಿನಾಲ್ಕರಂದು ನಡೆಯುವ ಮೇಷ ಸಂಕ್ರಮಣದಂದು ಧ್ವಜಾರೋಹಣದ ಬಳಿಕ ಏಳನೇ ದಿನವಾದ ಏಪ್ರಿಲ್ ಇಪ್ಪತ್ತೊಂದರಂದು ಅವಭ್ರತೋತ್ಸವದ ಮುಂಜಾನೆ ನಡೆಯುತ್ತದೆ. ಮಧ್ಯರಾತ್ರಿ ಬಳಿಕ ಸೂರ್ಯೋದಯಕ್ಕೂ ಮುನ್ನ ನಡೆಯುವ ಈ ವಿಶಿಷ್ಟ ಆಚರಣೆ ವಿಶೇಷತೆಯನ್ನು ಹೊಂದಿದೆ.

ದೇವಿಯ ಉತ್ಸವ ಬಲಿ ಸಂಜೆ ದೇವಸ್ಥಾನದಿಂದ ಹೊರಟು ಕಟ್ಟೆ ಪೂಜೆ ಸ್ವೀಕರಿಸಿ ರಥಬೀದಿಗೆ ಆಗಮಿಸುತ್ತದೆ. ನಂತರ ಬ್ರಹ್ಮರಥೋತ್ಸವ ನಡೆಯುತ್ತದೆ ಮತ್ತು ನಂದಿನಿ ನದಿಯ ತೀರದಲ್ಲಿ ಅವಭ್ರತ ಸ್ನಾನ ನೆರವೇರಿಸಲಾಗುತ್ತದೆ. ಅಲ್ಲಿಂದ ಹಿಂದಿರುಗುವ ವೇಳೆ ತೂಟೆದಾರ ನಡೆಯುತ್ತದೆ.

ಶುದ್ಧಾಚಾರದಲ್ಲಿ ಇರುವ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರ ನಡುವೆ ಈ ಕ್ರೀಡೆ ನಡೆಯುತ್ತದೆ. ಹಿರಿಯರ ಸೂಚನೆ ಸಿಗುತ್ತಿದ್ದಂತೆಯೇ ತೆಂಗಿನಗರಿಯ ಸೂಟೆಗಳಿಗೆ ಬೆಂಕಿ ಹಚ್ಚಿ ಪರಸ್ಪರ ಎಸೆಯಲಾಗುತ್ತದೆ. ದಟ್ಟ ಹೊಗೆ ಮತ್ತು ಬೆಂಕಿಯ ಕಿಡಿಗಳ ನಡುವೆ ಕಟೀಲು ರಥಬೀದಿ ರಣರಂಗದಂತಾಗುತ್ತದೆ.

ತೂಟೆದಾರದಲ್ಲಿ ಭಾಗವಹಿಸುವವರಿಗೆ ದೇವಸ್ಥಾನದಿಂದ ಕುಂಕುಮ ಹಾಗೂ ಹೂಗಳನ್ನು ನೀಡಲಾಗುತ್ತದೆ. ಈ ಕುಂಕುಮವನ್ನು ಮೈಗೆ ಲೇಪಿಸುವ ಆಚರಣೆ ಇದೆ. ವಿಶೇಷವೆಂದರೆ, ಇಂತಹ ಅಪಾಯಕರ ದೃಶ್ಯಗಳ ನಡುವೆಯೂ ಇದುವರೆಗೆ ಯಾವುದೇ ಅಗ್ನಿ ಅನಾಹುತ ಸಂಭವಿಸಿಲ್ಲ ಎಂಬ ನಂಬಿಕೆ ಇದೆ.

ಸ್ನೇಹಭಾವ ಹೊಂದಿರುವ ಅತ್ತೂರು-ಕೊಡೆತ್ತೂರು ಗ್ರಾಮಸ್ಥರು ಈ ದಿನ ವೈರಿಗಳಂತೆ ಕಾದಾಡಿದರೂ, ಕಾದಾಟ ಮಿತಿ ಮೀರುವುದನ್ನು ಹಿರಿಯರು ನಿಯಂತ್ರಿಸುತ್ತಾರೆ. ಅರುಣಾಸುರನ ಸಂಹಾರ ಸಂದರ್ಭದಲ್ಲಿ ಅಗ್ನಿಯಿಂದ ದೇವಿಯನ್ನು ಸ್ವಾಗತಿಸಲಾಯಿತೆಂಬ ನಂಬಿಕೆಯಿಂದ ಈ ಆಚರಣೆ ನಡೆಯುತ್ತದೆ.

ತೂಟೆದಾರದಲ್ಲಿ ಹಿಂದೆ ಸರಿದವರು ಸೋತವರಾಗಿ ಪರಿಗಣಿಸಲ್ಪಡುವುದರಿಂದ, ಗೆಲುವಿನ ಛಲದಿಂದಲೇ ಎರಡೂ ತಂಡಗಳು ಉತ್ಸಾಹದಿಂದ ಭಾಗವಹಿಸುತ್ತವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!