ಎನ್.ಎಂ.ಪಿ.ಎ. ಶಾಲೆ ವಿಲೀನ ಯತ್ನಕ್ಕೆ ಬಿ.ಎ. ಮೊಯ್ದೀನ್ ಬಾವಾ ಆಕ್ರೋಶ: ಹೋರಾಟದ ಎಚ್ಚರಿಕೆ

ನವಮಂಗಳೂರು ಬಂದರು ಮಂಡಳಿ (NMPA) ಆಡಳಿತಕ್ಕೆ ಒಳಪಟ್ಟಿರುವ ಹಾಗೂ ಕಳೆದ ನಾಲ್ಕು ದಶಕಗಳಿಂದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ದಾರಿದೀಪವಾಗಿರುವ ಎನ್.ಎಂ.ಪಿ.ಎ. ಆಂಗ್ಲ ಮಾಧ್ಯಮ ಶಾಲೆಯನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಯತ್ನಕ್ಕೆ ಮಾಜಿ ಶಾಸಕ ಬಿ.ಎ. ಮೊಯ್ದೀನ್ ಬಾವಾ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಗತ್ಯವಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಶಾಲೆ ಕೇವಲ ಕಟ್ಟಡವಲ್ಲ; ನವಮಂಗಳೂರು ಬಂದರಿಗಾಗಿ ತಮ್ಮ ಭೂಮಿಯನ್ನು ತ್ಯಾಗ ಮಾಡಿದ ಕುಟುಂಬಗಳ ಮಕ್ಕಳ ಭವಿಷ್ಯದ ಕೇಂದ್ರವಾಗಿದೆ. ಚಿತ್ರಾಪುರ, ಹೊಸಬೆಟ್ಟು, ಸುರತ್ಕಲ್, ಕಾಟಿಪಳ್ಳ ಹಾಗೂ ಕೃಷ್ಣಾಪುರ ಭಾಗಗಳ ನೂರಾರು ಬಡ ವಿದ್ಯಾರ್ಥಿಗಳು ಈ ಶಾಲೆಯ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಪವಿತ್ರ ವಿದ್ಯಾಕೇಂದ್ರವನ್ನು ಮುಚ್ಚುವ ಯಾವುದೇ ಪ್ರಯತ್ನ ಸಹಿಸಲಾಗುವುದಿಲ್ಲ,” ಎಂದು ಹೇಳಿದರು.

ಶಾಲೆಯನ್ನು ವಿಲೀನಗೊಳಿಸುವ ಮಂಡಳಿಯ ನಿರ್ಧಾರವನ್ನು ಕಟುವಾಗಿ ಟೀಕಿಸಿದ ಅವರು, “ಎನ್.ಎಂ.ಪಿ.ಎ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಈ ಶಾಲೆಯನ್ನು ನಿಲ್ಲಿಸಬಾರದು ಅಥವಾ ವಿಲೀನಗೊಳಿಸಬಾರದು. ಸ್ಥಳೀಯರ ಭಾವನೆಗಳೊಂದಿಗೆ ಆಟವಾಡಬೇಡಿ. ಈ ನಿರ್ಧಾರ ಮುಂದುವರಿದರೆ, ಶಾಂತಿಯುತವಾಗಿ ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗುತ್ತದೆ,” ಎಂದು ಎಚ್ಚರಿಸಿದರು.

ದಾಖಲಾತಿ ತಕ್ಷಣ ಆರಂಭಿಸಲಿ:
ಶೈಕ್ಷಣಿಕ ವರ್ಷ ಆರಂಭದ ವೇಳೆಯಲ್ಲೂ ಒಂದನೇ ತರಗತಿಯ ದಾಖಲಾತಿ ಪ್ರಕ್ರಿಯೆ ಆರಂಭವಾಗದಿರುವುದನ್ನು ಖಂಡಿಸಿದ ಬಾವಾ, “ಮಂಡಳಿ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ತಕ್ಷಣ ಆದೇಶ ನೀಡಿ, ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಯಾವುದೇ ವಿಳಂಬವಿಲ್ಲದೆ ಮಕ್ಕಳ ದಾಖಲಾತಿ ಸ್ವೀಕರಿಸಲು ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.

ಖಾಸಗಿ ಶಾಲೆಗಳನ್ನು ಸರಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು ಅವಕಾಶವಿಲ್ಲದಿದ್ದರೂ, ಎನ್.ಎಂ.ಪಿ.ಎ. ಮಂಡಳಿ ಇಂತಹ ನಿರ್ಧಾರಕ್ಕೆ ಮುಂದಾಗಿರುವುದು ಅವಿವೇಕದ ಸಂಗತಿ ಎಂದು ಅವರು ಆರೋಪಿಸಿದರು. “ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಶಿಕ್ಷಣ ಸಚಿವರ ಗಮನಕ್ಕೂ ವಿಷಯವನ್ನು ತಂದಿದ್ದೇನೆ. ಹಿಂದೆ ಮುಚ್ಚಲ್ಪಟ್ಟ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿಗಳನ್ನು ಪುನರಾರಂಭಿಸಬೇಕು,” ಎಂದು ಹೇಳಿದರು.

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಶಾಲೆಯನ್ನು ಉಳಿಸಲು ಪಾಲಕರು ಹಾಗೂ ಹಳೆಯ ವಿದ್ಯಾರ್ಥಿಗಳೊಂದಿಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಕಮಲಕರ, ಜಾರ್ಜ್ ವಿನ್ಸೆಂಟ್ ಹಾಗೂ ಮೊಹಮ್ಮದ್ ಇಮ್ರಾನ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!