ಮಂಗಳೂರು: ಕೇಂದ್ರ ಚುನಾವಣಾ ಆಯೋಗವು 2025ರ ಜೂನ್ನಲ್ಲಿ ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳಿದ್ದು, ಮತದಾರರು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರು ಆರೋಪಿಸಿದರು.

ನಗರದ ಎಸ್ಡಿಪಿಐ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯನ್ನು ಮೊದಲಿಗೆ 2025ರ ಜೂನ್ 26ರಂದು ಬಿಹಾರದಲ್ಲಿ ಜಾರಿಗೊಳಿಸಲಾಗಿತ್ತು. ಅಲ್ಲಿ ಹಲವು ಗೊಂದಲಗಳು ಉಂಟಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತ್ತು. ಬಳಿಕ ಕರ್ನಾಟಕ ಸೇರಿದಂತೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 29ರಿಂದ ಬಿಎಲ್ಒಗಳ ಮೂಲಕ ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಬಿಎಲ್ಒಗಳಿಗೆ ಸಮರ್ಪಕ ತರಬೇತಿ ನೀಡದೆ ಅಲ್ಪಾವಧಿಯ ತರಬೇತಿಯಲ್ಲೇ ಕಾರ್ಯ ಆರಂಭಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸದೆ ನೇರವಾಗಿ ಫಾರ್ಮ್ಗಳನ್ನು ವಿತರಿಸಿರುವುದರಿಂದ ಮತದಾರರು ಫಾರ್ಮ್ ಭರ್ತಿ ಹಾಗೂ ಅಗತ್ಯ ದಾಖಲೆಗಳ ಸಲ್ಲಿಕೆಯಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದರು.

ಅಗತ್ಯ ಪ್ರಮಾಣದಲ್ಲಿ ಫಾರ್ಮ್ಗಳು ಲಭ್ಯವಾಗದಿರುವುದು ಹಾಗೂ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಒಗಳಾಗಿ ವ್ಯಾಪಕವಾಗಿ ನಿಯೋಜಿಸಿರುವುದರಿಂದ ಅವರ ಮೂಲ ಕರ್ತವ್ಯಗಳಿಗೂ ತೊಂದರೆಯಾಗಿದೆ. ಶಾಲಾ ಶಿಕ್ಷಕರು ಪಾಠ ಮುಗಿದ ಬಳಿಕ ಮನೆಮನೆಗೆ ತೆರಳಿ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಎಸ್ಐಆರ್ ಕರ್ತವ್ಯದ ವೇಳೆ ಕೆಲವು ಬಿಎಲ್ಒಗಳು ಮೃತಪಟ್ಟಿರುವುದಾಗಿ ಆರೋಪಿಸಲಾಗಿದ್ದು, ಕೆಲಸದ ಒತ್ತಡ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕರ್ತವ್ಯ ನಿರ್ಲಕ್ಷ್ಯ ಮಾಡಿದರೆ ಬಿಎಲ್ಒಗಳ ವಿರುದ್ಧ ಎಫ್ಐಆರ್ ದಾಖಲಿಸುವ ಕುರಿತು ಅಧಿಕಾರಿಗಳ ಹೇಳಿಕೆಯೂ ಆತಂಕಕ್ಕೆ ಕಾರಣವಾಗಿದೆ. ಎಸ್ಐಆರ್ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಡಿಪಿಐ ಮಂಗಳೂರು ನಗರ ಉಪಾಧ್ಯಕ್ಷ ಅಬ್ದುಲ್ ಹಸೀನ್ ಹಾಗೂ ಸಮಿತಿ ಸದಸ್ಯ ಅಕ್ಬರ್ ಉಪಸ್ಥಿತರಿದ್ದರು.

