ಪುತ್ತೂರಿನ ಹೃದಯಭಾಗದಲ್ಲಿರುವ ಖಾಸಗಿ ಜಮೀನು ಹಾಗೂ ಹಳೆಯ ಕಟ್ಟಡವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಅವರ ಬೆಂಬಲಿಗರು ಕಾನೂನುಬಾಹಿರವಾಗಿ ಅತಿಕ್ರಮಿಸಿ ಧ್ವಂಸಗೊಳಿಸಿದ್ದಾರೆ ಎಂದು ಕೋರ್ಟ್ ರಿಸೀವರ್ ಡಾ. ಅರವಿಂದ ರಾವ್ ಕೇದಿಗೆ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 14, 2026ರ ತಡರಾತ್ರಿ ಪುತ್ತೂರು ಮಹಿಳಾ ಪೊಲೀಸ್ ಠಾಣೆ ಎದುರಿನ ಹಳೆಯ ಕಟ್ಟಡಕ್ಕೆ ಶಾಸಕ ಅಶೋಕ್ ರೈ, ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಅವರ ಬೆಂಬಲಿಗರು ಜೆಸಿಬಿ ಮತ್ತು ಟಿಪ್ಪರ್‌ನೊಂದಿಗೆ ನುಗ್ಗಿದ್ದಾರೆ ಎಂದು ಹೇಳಿದರು. ನ್ಯಾಯಾಲಯದ ಆದೇಶವಿದೆ ಎಂದು ಹೇಳಿ ನಿರಾಲಾ ಬಾರ್‌ನ ಬೀಗ ಮುರಿದು, ಸುಮಾರು 10 ಸಾವಿರ ಚದರ ಅಡಿಯ ಕಟ್ಟಡವನ್ನು ಭಾಗಶಃ ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿದರು.
ಈ ವೇಳೆ ಬೆಲೆಬಾಳುವ ಮರಮುಟ್ಟು ಮತ್ತು ಇತರ ಸಾಮಗ್ರಿಗಳನ್ನು ಕೊಂಡೊಯ್ದು ಅಂದಾಜು 2 ಕೋಟಿ ರೂಪಾಯಿ ನಷ್ಟ ಉಂಟುಮಾಡಲಾಗಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ 9.79 ಎಕರೆ ಜಮೀನು ಕೇದಿಗೆ ಕುಟುಂಬದ ಆಸ್ತಿಯಾಗಿದ್ದು, ಈ ಕುರಿತು ದಶಕಗಳಿಂದ ನ್ಯಾಯಾಲಯದಲ್ಲಿ ಸಿವಿಲ್ ದಾವೆ ನಡೆಯುತ್ತಿದೆ. ಆಸ್ತಿ ನ್ಯಾಯಾಲಯದ ಅಧೀನದಲ್ಲಿದ್ದು, ಯಾವುದೇ ಅತಿಕ್ರಮಣ ಮಾಡದಂತೆ ತಡೆಯಾಜ್ಞೆ ಜಾರಿಯಲ್ಲಿದೆ. ಹೀಗಿದ್ದರೂ ಶಾಸಕರು ಅಧಿಕಾರ ದುರುಪಯೋಗಪಡಿಸಿಕೊಂಡು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಆರೋಪಿಸಿದರು. ಈ ಸಂಬಂಧ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರು.
ಕೇದಿಗೆ ಕುಟುಂಬವು ಈ ಜಮೀನಿನಲ್ಲಿರುವ ದೈವ ಕಟ್ಟೆಯನ್ನು 1946ರಿಂದ ಪೂಜಿಸುತ್ತಿದ್ದು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಶಾಸಕರು ದೈವದ ಹೆಸರಿನಲ್ಲಿ ಖಾಸಗಿ ಆಸ್ತಿಗೆ ಧಕ್ಕೆ ತರುತ್ತಿದ್ದಾರೆ ಎಂದು ಹೇಳಿದರು. ಅತಿಕ್ರಮಣದ ವೇಳೆ ಸಾರ್ವಜನಿಕರನ್ನು ದಾರಿ ತಪ್ಪಿಸಲು ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಘಟನೆ ಕುರಿತು ಪೊಲೀಸ್ ಇಲಾಖೆ, ನ್ಯಾಯಾಲಯ ಹಾಗೂ ಪುತ್ತೂರು ನಗರಸಭೆಯ ಗಮನಕ್ಕೆ ತರಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನುಬದ್ದ ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಡಾ. ಅರವಿಂದ ರಾವ್ ಕೇದಿಗೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಡಿಕೆ ಕುಟುಂಬಸ್ಥರಾದ ಭವಾನಿ ಶಂಕರ್, ಸುಮಿತ್, ಧೀರಜ್ ಮತ್ತು ಮನೋಜ್ ಉಪಸ್ಥಿತರಿದ್ದರು.