ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದರೆ, ಈ ತಡೆಯಾಜ್ಞೆಯ ಜೊತೆಗೆ ಸಂತ್ರಸ್ತೆ ಮತ್ತು ಮಗುವಿನ ಜೀವನ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ಷರತ್ತು ವಿಧಿಸಿದೆ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿ ಮಾಡಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆ ನೀಡಿದೆ.
ಇದೇ ವೇಳೆ, ಸಂತ್ರಸ್ತೆ ಹಾಗೂ ಮಗುವಿನ ಹಿತದೃಷ್ಟಿಯಿಂದ ಅರ್ಜಿದಾರರು ಅಥವಾ ಅವರ ಪೋಷಕರು ಪ್ರತಿ ತಿಂಗಳು ₹75 ಸಾವಿರವನ್ನು ಜೀವನ ನಿರ್ವಹಣೆಗೆ ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಆದೇಶದ ಪ್ರಕಾರ, ಮೊದಲ ಕಂತಿನ ₹75 ಸಾವಿರವನ್ನು ಒಂದು ವಾರದೊಳಗೆ ಸಂತ್ರಸ್ತೆಗೆ ಪಾವತಿಸಬೇಕು. ನಂತರ ಪ್ರತಿ ತಿಂಗಳು ಇದೇ ಮೊತ್ತವನ್ನು ನಿಯಮಿತವಾಗಿ ನೀಡಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ಆರ್ಥಿಕ ಷರತ್ತು ಪಾಲನೆಯಲ್ಲಿದ್ದರೆ ಮಾತ್ರ ಪ್ರಕರಣಕ್ಕೆ ನೀಡಿರುವ ತಡೆಯಾಜ್ಞೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸೂಚಿಸಿದೆ.