ಶಿರಿಯ ಹೊಳೆಯಲ್ಲಿ ಅನಧಿಕೃತ ಮರಳು ಸಂಗ್ರಹ: ಪರಾರಿಯಾಗಿದ್ದ ಲಾರಿ ಮಾಲೀಕ ಬಂಧನ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ವ್ಯಾಪ್ತಿಯ ಶಿರಿಯ ಹೊಳೆಯ ಹೇರೂರು ಪೈಯಾರ್‌ಕಡವಿನಲ್ಲಿ ಅನಧಿಕೃತವಾಗಿ ಮರಳು (ಹೊಯ್ಗೆ) ಸಂಗ್ರಹಿಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಇದೀಗ ತಲೆಮರೆಸಿಕೊಂಡಿದ್ದ ಲಾರಿ ಮಾಲೀಕ ಎಂ. ಅಶ್ರಫ್‌ನನ್ನು ಬಂಧಿಸಿದ್ದಾರೆ.

ಕಳೆದ ಮಾರ್ಚ್ 30ರಂದು ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ ವೇಳೆ, ಲಾರಿಯಲ್ಲಿದ್ದ ಅಶ್ರಫ್ ಹಾಗೂ ಮರಳು ತುಂಬಿಸುತ್ತಿದ್ದ ಐವರು ಕಾರ್ಮಿಕರು ವಾಹನ ಮತ್ತು ಉಪಕರಣಗಳನ್ನು ಬಿಟ್ಟು ಪರಾರಿಯಾಗಿದ್ದರು. ಬಳಿಕ ಪೊಲೀಸರು ಸ್ಥಳದಲ್ಲಿದ್ದ ಮರಳು ತುಂಬಿದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ಸಂಬಂಧ ನಿರಂತರ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಅಶ್ರಫ್ ಸಿಕ್ಕಿಬಿದ್ದಿದ್ದು, ಬಂಧಿಸಲಾಗಿದೆ. ಇನ್ನು ಪರಾರಿಯಾಗಿರುವ ಉಳಿದ ನಾಲ್ವರು ಕಾರ್ಮಿಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಬಂಧನದಿಂದ ಅನಧಿಕೃತ ಮರಳು ದಂಧೆ ನಡೆಸುವವರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!