ಕಾಸರಗೋಡು ಜಿಲ್ಲೆಯ ಮಂಜೇಶ್ವರ ವ್ಯಾಪ್ತಿಯಲ್ಲಿ ಅಕ್ರಮವಾಗಿ ನದಿಯಿಂದ ಮರಳು ಕದ್ದೊಯ್ಯುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅಮೀನಡ್ಕ ಕಲ್ಲಿಗೆ ಹೌಸ್ನ ಸದಾನಂದ (55) ಹಾಗೂ ಟಿಪ್ಪರ್ ಲಾರಿ ಚಾಲಕ ಬಡಾಜೆ ಕನಿಲ ಹೌಸ್ನ ಸಾಕೀರ್ (31) ಬಂಧಿತರು.
ಪೊಲೀಸ್ ಉಪನಿರೀಕ್ಷಕ ವೈಷ್ಣವ್ ರಾಮಚಂದ್ರ ಅವರ ನೇತೃತ್ವದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಮರಳು ಸಾಗಣೆಗೆ ಬಳಸಿದ್ದ ಟಿಪ್ಪರ್ ಲಾರಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದರೂ, ಅದನ್ನು ಲೆಕ್ಕಿಸದೆ ನಿರಂತರವಾಗಿ ದಂಧೆ ಮುಂದುವರಿಸುತ್ತಿದ್ದರು. ಪೊಲೀಸರಿಗೆ ಸವಾಲು ಹಾಕಿ ಮರಳು ಕಳ್ಳತನ ನಡೆಸುವುದರ ಜೊತೆಗೆ, ದಾಳಿ ವೇಳೆ ಪ್ರತಿರೋಧ ತೋರಲು ಯತ್ನಿಸಿದರೆಂದು ತಿಳಿದುಬಂದಿದೆ. ಸದಾನಂದ ತನ್ನ ಮನೆಗೆ ವಿಶೇಷ ರಸ್ತೆ ನಿರ್ಮಿಸಿ, ಮನೆಯ ಆವರಣದಲ್ಲಿ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದನು ಎಂಬ ಆರೋಪವೂ ಕೇಳಿಬಂದಿದೆ.
ಅಕ್ರಮ ಮರಳು ವಹಿವಾಟು ವಿರುದ್ಧ ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರೂ, ನಿಯಮ ಉಲ್ಲಂಘನೆ ಮುಂದುವರಿದ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಮರಳು ದಂಧೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೊಗ್ರಾಲ್ ನದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಸಮೀಪ ನೀರಿನಲ್ಲಿ ಮುಳುಗಿಸಿ ಇಡಲಾಗಿದ್ದ ಆರು ದೋಣಿಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಧ್ವಂಸಗೊಳಿಸಲಾಗಿದೆ. ಕುಂಬಳೆ ಪೊಲೀಸ್ ಅಧಿಕಾರಿಗಳಾದ ಸನೀತ್ ಮತ್ತು ಅನಂತಕೃಷ್ಣ ಆರ್ ಮೆನನ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇನ್ನೊಂದು ಪ್ರಕರಣದಲ್ಲಿ ಆರಿಕ್ಕಾಡಿ ಕೆಪಿ ರೆಸೂರ್ಟ್ ಸಮೀಪ ಶಿರಿಯಾ ನದಿಯಿಂದ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕ ಪರಾರಿಯಾಗಿದ್ದಾನೆ. ಅಕ್ರಮ ಮರಳು ವಹಿವಾಟಿಗೆ ಸಂಬಂಧಿಸಿದಂತೆ ಒಟ್ಟು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.