ಬೆಂಕಿಯುಂಡೆಯಾದ ಬಾನು: ಕಮರುತ್ತಿರುವ ಕೃಷಿ ಮತ್ತು ವನ್ಯಜೀವಿಗಳ ಆರ್ತನಾದ

ಪ್ರಕೃತಿಯ ಋತುಚಕ್ರದಲ್ಲಿ ಬೇಸಿಗೆ ಎನ್ನುವುದು ಒಂದು ಸಹಜ ಪ್ರಕ್ರಿಯೆ. ಆದರೆ ಇಂದು ನಮಗೆ ಎದುರಾಗುತ್ತಿರುವ ಬಿಸಿಲು ಕೇವಲ ಕಾಲಧರ್ಮವಾಗಿ ಉಳಿದಿಲ್ಲ; ಅದು ಪ್ರಕೃತಿ ಮನುಕುಲಕ್ಕೆ ನೀಡುತ್ತಿರುವ ತೀವ್ರ ಎಚ್ಚರಿಕೆಯ ಗಂಟೆಯಂತೆ ಭಾಸವಾಗುತ್ತಿದೆ. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಕೇವಲ ನಮ್ಮ ಚರ್ಮವನ್ನು ಸುಡುತ್ತಿಲ್ಲ, ಬದಲಾಗಿ ನಮ್ಮ ನಾಳಿನ ಬದುಕಿನ ಭದ್ರತೆಯನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ. ಆಕಾಶದಿಂದ ಸುರಿಯುವ ಬೆಂಕಿ ಮಳೆ ಅಕ್ಷರಶಃ ಭೂಮಿಯನ್ನು ಬೆವರುವಂತೆ ಮಾಡುತ್ತಿದೆ. ಕೃಷಿಯನ್ನೇ ಉಸಿರಾಗಿಸಿಕೊಂಡ ಹಳ್ಳಿಗಾಡಿನ ಮಣ್ಣಿನ ಮಕ್ಕಳಿಗೆ ಈ ಬಿಸಿಲು ಶಾಪವಾಗಿ ಪರಿಣಮಿಸಿದೆ. ಕೆರೆ-ಕುಂಟೆಗಳು ಬತ್ತಿ ಬಣಗುಡುತ್ತಿವೆ, ಭೂಮಿಯ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಕರಾವಳಿ ಮತ್ತು ಮಲೆನಾಡಿನ ಭಾಗದ ಜೀವನಾಡಿಗಳಾದ ಅಡಿಕೆ, ತೆಂಗು, ರಬ್ಬರ್‌ನಂತಹ ತೋಟಗಾರಿಕಾ ಬೆಳೆಗಳು ಬಿಸಿಲಿನ ತೀವ್ರತೆಗೆ ಬಾಡಿ ಹೋಗುತ್ತಿವೆ. ಹನಿ ನೀರಿಗೂ ಬಕಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾದಾಗ, ರೈತ ತನ್ನ ಬೆವರನ್ನೇ ನೀರಾಗಿ ಉಣಿಸಿ ಬೆಳೆಸಿದ ಫಸಲು ಕಣ್ಣೆದುರೇ ಕಮರಿ ಹೋಗುವುದನ್ನು ನೋಡುವುದು ಅತ್ಯಂತ ಅಸಹನೀಯ ವೇದನೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಭೂತಾಯಿ ಇಂದು ತಲ್ಲಣಿಸುತ್ತಿದ್ದಾಳೆ.


​ಈ ತಾಪಮಾನದ ಏರಿಕೆ ಕೇವಲ ಕೃಷಿಯ ಮೇಲೆ ಮಾತ್ರವಲ್ಲ, ಜೀವರಾಶಿಗಳ ನಡುವಿನ ಸಮತೋಲನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾಡುಗಳಲ್ಲಿ ನೀರಿನ ಸೆಲೆಗಳು ಬತ್ತಿ ಹೋದಾಗ, ಬಾಯಾರಿಕೆಯಿಂದ ಕಂಗೆಟ್ಟ ವನ್ಯಜೀವಿಗಳು ನೀರು ಮತ್ತು ತಂಪನ್ನು ಹುಡುಕುತ್ತಾ ಜನವಸತಿ ಪ್ರದೇಶಗಳತ್ತ ಮುಖ ಮಾಡುತ್ತಿವೆ. ಕಾಡುಪ್ರಾಣಿಗಳ ಈ ಅನಿವಾರ್ಯ ವಲಸೆ ಮಾನವ-ವನ್ಯಜೀವಿ ಸಂಘರ್ಷಕ್ಕೆ ನಾಂದಿ ಹಾಡುತ್ತಿದೆ. ಮುಖ್ಯವಾಗಿ, ಈ ಬೇಸಿಗೆಯ ಸಮಯದಲ್ಲಿ ನಾವು ಅತೀ ಹೆಚ್ಚು ಎಚ್ಚರದಿಂದಿರಬೇಕಾದದ್ದು ಹಾವಿನಂತಹ ಸರೀಸೃಪಗಳ ಬಗ್ಗೆ. ಬಿಸಿಲು ತಡೆಯಲಾರದೆ ತಂಪಿನ ಆಶ್ರಯ ಅರಸುತ್ತಾ ಹಾವುಗಳು ಮನೆಗಳ ಆವರಣ, ಕೊಟ್ಟಿಗೆ, ತೋಟದ ಮೂಲೆ ಅಥವಾ ಪಂಪ್ ಶೆಡ್‌ಗಳ ಒಳಗೆ ಸೇರಿಕೊಳ್ಳುತ್ತಿವೆ. ಅಜಾಗರೂಕತೆಯಿಂದ ಇವುಗಳ ಮೇಲೆ ಕಾಲಿಟ್ಟರೆ ಜೀವಕ್ಕೆ ಸಂಚಕಾರ ಬರಬಹುದು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಕತ್ತಲೆಯಲ್ಲಿ ಓಡಾಡುವಾಗ ಎಚ್ಚರ ವಹಿಸುವುದು ಇಂದು ಅನಿವಾರ್ಯವಾಗಿದೆ.


​ಒಂದು ಕಾಲದಲ್ಲಿ ದಟ್ಟವಾದ ಮರಗಿಡಗಳ ನೆರಳಿನ ಅಡಿಯಲ್ಲಿ ಬಿಸಿಲಿನ ಬೇಗೆ ನಮಗೆ ಅಷ್ಟಾಗಿ ತಟ್ಟುತ್ತಿರಲಿಲ್ಲ. ಆದರೆ ಇಂದು ನಗರೀಕರಣದ ಅಂಧಾನುಕರಣೆಯಲ್ಲಿ ನಾವು ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಉರುಳಿಸುತ್ತಿದ್ದೇವೆ. ಹಸಿರು ಹಾಸಿನಂತಿದ್ದ ಗುಡ್ಡಗಳನ್ನು ಅಗೆದು ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ಸ್ವಾಭಾವಿಕ ತಂಪು ಮಾಯವಾದಂತೆಲ್ಲಾ ವಾತಾವರಣದ ಉಷ್ಣತೆ ಮಿತಿಮೀರುತ್ತಿದೆ. ನಾವು ಎಷ್ಟೇ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ತಾತ್ಕಾಲಿಕ ಸುಖ ಕಂಡುಕೊಂಡರೂ, ಹೊರಗಿನ ಪ್ರಕೃತಿ ಕಾಯುತ್ತಿರುವಾಗ ಆ ಕಾಂಕ್ರೀಟ್ ಗೋಡೆಗಳು ನಮಗೆ ಶಾಶ್ವತ ರಕ್ಷಣೆ ನೀಡಲಾರವು. ಈ ಬಿಸಿಲಿನ ಝಳಕ್ಕೆ ನಾವು ಕೇವಲ ಪ್ರಕೃತಿಯನ್ನು ಅಥವಾ ಕಾಲವನ್ನು ದೂಷಿಸಿ ಪ್ರಯೋಜನವಿಲ್ಲ. ಇದಕ್ಕೆ ಮೂಲ ಕಾರಣರಾದ ನಾವುಗಳೇ ಈಗ ಎಚ್ಚೆತ್ತುಕೊಳ್ಳಬೇಕಿದೆ. ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ಕೇವಲ ಭಾಷಣಕ್ಕೆ ಸೀಮಿತವಾಗದೆ ಪ್ರತಿ ಮನೆಯ ಮಂತ್ರವಾಗಬೇಕಿದೆ. ಮನೆಗೊಂದು ಮರ, ಊರಿಗೊಂದು ವನ ಎಂಬ ತತ್ವವನ್ನು ನಾವು ಮತ್ತೆ ಬದುಕಿಗೆ ಅಳವಡಿಸಿಕೊಳ್ಳಬೇಕಿದೆ.

ಹಸಿರು ಇದ್ದರೆ ಮಾತ್ರ ಹವಾಗುಣ ಸಮತೋಲನದಲ್ಲಿರಲು ಸಾಧ್ಯ. ಅಗತ್ಯಕ್ಕಿಂತ ಹೆಚ್ಚಿನ ಯಂತ್ರೋಪಕರಣಗಳ ಬಳಕೆ ಮತ್ತು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಸಂಸ್ಕೃತಿಯನ್ನು ದೂರವಿಟ್ಟು ಸರಳ ಬದುಕಿನತ್ತ ಹೆಜ್ಜೆ ಹಾಕಬೇಕಿದೆ. ​ಬಿಸಿಲು ಸೃಷ್ಟಿಯ ನಿಯಮವಿರಬಹುದು, ಆದರೆ ಅದರ ಇಂದಿನ ರೌದ್ರಾವತಾರ ಮನುಷ್ಯನ ಹಸ್ತಕ್ಷೇಪದ ಕಹಿ ಫಲ. ನಾವು ಪ್ರಕೃತಿಯನ್ನು ಪ್ರೀತಿಸಿ ಪೂಜಿಸಿದರೆ ಮಾತ್ರ ಪ್ರಕೃತಿ ನಮ್ಮನ್ನು ಪೋಷಿಸುತ್ತದೆ. ಇಂದಿನ ಈ ಸುಡುವ ಬಿಸಿಲು ನಮ್ಮಲ್ಲಿ ಪರಿಸರ ಪ್ರಜ್ಞೆಯ ಹೊಸ ಸಂಚಲನ ಮೂಡಿಸಲಿ. ಮುಂದಿನ ಪೀಳಿಗೆಗೆ ಬತ್ತಿ ಹೋದ ಕೆರೆಗಳು ಮತ್ತು ಸುಡುವ ಭೂಮಿಯನ್ನು ಪರಂಪರೆಯಾಗಿ ನೀಡುವ ಬದಲು, ತಂಪಾದ ನೆರಳಿನ ಸುಂದರ ಹಸಿರು ಪರಿಸರವನ್ನು ಬಿಟ್ಟು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ.

✍️ ಬರಹ: ದಯಾನಂದ ರೈ ಕಳ್ವಾಜೆ

SHARE
Loading spinner

Leave a Reply

Your email address will not be published. Required fields are marked *

error: Content is protected !!