ಇಂಜಿನಿಯರಿಂಗ್ ಓದಿ ಉದ್ಯೋಗ ಪಡೆದು, ಜೀವನದ ಮೊದಲ ಸಂಬಳ ಕೈಗೆ ಬಂದ ದಿನ. ಅವನ ಕಣ್ಣುಗಳಲ್ಲಿ ಸಂತೋಷದ ಹೊಳಪು, ಹೃದಯದಲ್ಲಿ ಕೃತಜ್ಞತೆಯ ಅಲೆ. ಮನೆಗೆ ಬಂದು ಆ ಸಂಬಳವನ್ನು ತಾಯಿಯ ಕೈಯಲ್ಲಿಟ್ಟು, ಅಮ್ಮಾ… ಇದನ್ನು ಅಪ್ಪನಿಗೆ ಕೊಡಿ ಎಂದನು. ಆಗ ತಾಯಿ ಮೃದುವಾಗಿ ನಗುತ್ತಾ ಹೇಳಿದಳು: ಮಗನೇ, ನೀನೇ ನಿನ್ನ ಕೈಯಿಂದ ಕೊಡು. ಅದು ನಿನ್ನ ಅಪ್ಪನಿಗೆ ತುಂಬಾ ಸಂತೋಷ ಕೊಡುತ್ತದೆ… ಆದರೆ ಮಗನ ಕಣ್ಣುಗಳು ತೇವಗೊಂಡವು. ಗಂಟಲು ಬಿಗಿಯಿತು. ನಿಧಾನವಾಗಿ ಹೇಳಿದನು: “ಇಲ್ಲ ಅಮ್ಮಾ… ನೀವೇ ಕೊಡಿ. ಏಕೆಂದರೆ ನಾನು ಚಿಕ್ಕವನಿದ್ದಾಗ ನನಗೆ ಶಾಲಾ ಫೀಸು ಕಟ್ಟಲು, ಪುಸ್ತಕಗಳನ್ನು ಕೊಂಡುಕೊಳ್ಳಲು, ಮಿಠಾಯಿ ತಿನ್ನಲು, ಬಟ್ಟೆಗಳನ್ನು ತರಲು ಹಣ ಕೊಡುವಾಗ ನನ್ನ ಅಪ್ಪನ ಕೈ ಮೇಲ್ಭಾಗದಲ್ಲಿತ್ತು, ನನ್ನ ಕೈ ಕೆಳಭಾಗದಲ್ಲಿತ್ತು. ಆಗ ಅವರು ಕೊಡುವವರಾಗಿದ್ದರು, ನಾನು ಪಡೆಯುವವನಾಗಿದ್ದೆ.
ಇಂದು ನಾನು ಈ ಹಣವನ್ನು ಅಪ್ಪನಿಗೆ ಕೊಡುವಾಗ ನನ್ನ ಕೈ ಮೇಲ್ಭಾಗದಲ್ಲಿ, ಅವರ ಕೈ ಕೆಳಭಾಗದಲ್ಲಿ ಇರುವುದು ನನ್ನಿಂದ ಸಹಿಸಲಾಗುವುದಿಲ್ಲ. ಜೀವನಪೂರ್ತಿ ನನಗೆ ಕೊಟ್ಟ ಆ ಕೈ ಇಂದು ನನ್ನ ಮುಂದೆ ಪಡೆಯುವ ಕೈಯಾಗುವುದನ್ನು ನಾನು ಸಹಿಸಲಾರೆ ಅಮ್ಮಾ… ನನ್ನ ಅಪ್ಪ ನನ್ನ ಜೀವನದ ನಿಸ್ವಾರ್ಥಿ ಮಾರ್ಗದರ್ಶಕ. ಅವರ ಮುಂದೆ ನಾನು ಎಂದೆಂದಿಗೂ ಪಡೆಯುವವನಾಗಿಯೇ ಇರಲು ಬಯಸುತ್ತೇನೆ…
ಈ ಮಾತು ಕೇಳುವಾಗಲೇ ಹೃದಯ ತುಂಬಿ ಬರುತ್ತದೆ. ನಿಜವಾಗಿ, ಅಮ್ಮ-ಅಪ್ಪ ನಮ್ಮ ಜೀವನದ ಅಮೂಲ್ಯ ನಿಧಿಗಳು. ಅಮ್ಮ ತನ್ನ ಮಡಿಲಲ್ಲಿ ನಮ್ಮನ್ನು ಲಾಲನೆ ಪಾಲನೆ ಮಾಡಿ ಪೋಷಿಸಿದಳು. ನಿದ್ರೆಯನ್ನೂ ತ್ಯಜಿಸಿ ನಮ್ಮನ್ನು ಬೆಳೆಸಿದಳು. ನಮ್ಮ ಒಂದು ನಗುವಿಗಾಗಿ ಸಾವಿರ ಕಷ್ಟಗಳನ್ನು ಸಹಿಸಿಕೊಂಡಳು. ಅಪ್ಪ ತನ್ನ ಕನಸುಗಳನ್ನು ಬದಿಗಿಟ್ಟು, ತನ್ನ ಬೆವರಿನ ಹನಿಗಳನ್ನು ನಮ್ಮ ಭವಿಷ್ಯದ ಅಡಿಪಾಯವನ್ನಾಗಿ ಮಾಡಿದನು. ನಾವು ಎತ್ತರಕ್ಕೆ ಏರಬೇಕೆಂದು, ತಾನು ಕಾಣದ ಲೋಕವನ್ನು ನಾವು ಕಾಣಬೇಕೆಂದು, ತಾನು ಮುಟ್ಟದ ಶಿಖರವನ್ನು ನಾವು ಮುಟ್ಟಬೇಕೆಂದು ವಾತ್ಸಲ್ಯದಿಂದ ತನ್ನ ಹೆಗಲಿಗೇರಿಸಿಕೊಂಡನು. ಮಕ್ಕಳಿಗಾಗಿ ತನ್ನ ಜೀವನವನ್ನೇ ಅರ್ಪಿಸಿದ ಅಪ್ಪ. ನಮ್ಮ ಪ್ರತಿಯೊಂದು ಯಶಸ್ಸಿನ ಹಿಂದೆ ಅಪ್ಪನ ಒಣಗಿದ ಬೆವರಿನ ಹನಿಗಳೂ, ತಾಯಿಯ ಮೌನ ಕಣ್ಣೀರಿನ ಹನಿಗಳೂ ಅಡಗಿವೆ.
ಆದ್ದರಿಂದ, ಜೀವನದಲ್ಲಿ ಎಷ್ಟೇ ದೊಡ್ಡವರಾದರೂ, ಎಷ್ಟೇ ಹಣ-ಅಧಿಕಾರ ಸಂಪಾದಿಸಿದರೂ, ನಮ್ಮ ಮಾತಾಪಿತರ ಮುಂದೆ ನಾವು ಚಿಕ್ಕವರೇ. ಅವರ ಗೌರವಕ್ಕೆ ಧಕ್ಕೆಯಾಗುವ ಯಾವುದೇ ಕೃತ್ಯದಲ್ಲಿ ಭಾಗಿಯಾಗಬಾರದು. ಅವರ ಸ್ವಾಭಿಮಾನಕ್ಕೆ ನೋವುಂಟುಮಾಡುವ ಮಾತುಗಳನ್ನು ಆಡಬಾರದು. ಅವರ ತಲೆ ತಗ್ಗುವಂತೆ ಮಾಡುವ ಯಾವುದೇ ಪಾಪ, ಅನ್ಯಾಯ ಅಥವಾ ಸಮಾಜಘಾತಕ ಕೃತ್ಯ ನಮ್ಮಿಂದ ನಡೆಯಬಾರದು. ಏಕೆಂದರೆ ಈ ಲೋಕದಲ್ಲಿ ನಮ್ಮ ಯಶಸ್ಸಿಗೆ ಹರ್ಷಪಡುವವರು ಹಲವರಿರಬಹುದು. ಆದರೆ ನಮ್ಮ ಒಂದು ನೋವಿಗೆ ತಮ್ಮ ಹೃದಯವನ್ನೇ ಕೊಟ್ಟು ಅಳುವವರು ಅಪ್ಪ-ಅಮ್ಮ ಮಾತ್ರ. ಅವರು ಬದುಕಿರುವಾಗ ಅವರ ಮೌಲ್ಯವನ್ನು ಅರಿತುಕೊಳ್ಳಿ. ಅವರ ಕೈಗಳನ್ನು ಹಿಡಿದುಕೊಳ್ಳಿ. ಅವರಿಗಾಗಿ ಸಮಯ ಮೀಸಲಿಡಿ. ಅವರ ಹೃದಯಕ್ಕೆ ಸಂತೋಷ ಕೊಡಿ. ಏಕೆಂದರೆ ಒಂದು ದಿನ ಅವರ ಕುರ್ಚಿ ಖಾಲಿಯಾಗಬಹುದು. ಆಗ ಎಷ್ಟೇ ಅತ್ತರೂ, ಎಷ್ಟೇ ಹುಡುಕಿದರೂ, ಆ ನೆರಳು ಮತ್ತೆ ಸಿಗುವುದಿಲ್ಲ. ಅಪ್ಪ-ಅಮ್ಮ ನಮ್ಮ ಜೀವನದ ಕೇವಲ ಒಂದು ಅಧ್ಯಾಯವಲ್ಲ… ಅವರೇ ನಮ್ಮ ಜೀವನದ ಸಂಪೂರ್ಣ ಪುಸ್ತಕ.
ಅವರು ಬದುಕಿರುವಾಗ ಅವರ ನೆರಳಿನ ಮೌಲ್ಯ ತಿಳಿಯುವುದಿಲ್ಲ. ಆದರೆ ಆ ನೆರಳು ಕಳೆದುಹೋದ ದಿನ, ಜಗತ್ತಿನ ಯಾವ ಮರದ ನೆರಳೂ ಅವರ ಸ್ಥಾನವನ್ನು ತುಂಬಲಾರದು. ಆದ್ದರಿಂದ ಅವರು ಬದುಕಿರುವಾಗಲೇ ಅವರನ್ನು ಅಪ್ಪಿಕೊಳ್ಳಿ, ಅವರಿಗಾಗಿ ದುಆ ಮಾಡಿ, ಅವರ ಹೃದಯದಲ್ಲಿ ಸಂತೋಷ ಬಿತ್ತಿರಿ. ಏಕೆಂದರೆ ಜನ್ನತ್ನ (ಸ್ವರ್ಗದ) ಬಾಗಿಲುಗಳೂ ಅವರ ಸಂತೃಪ್ತಿಯ ಹಿಂದೆ ಅಡಗಿವೆ. ಅಪ್ಪ-ಅಮ್ಮ ನಮ್ಮನ್ನು ನಡೆಯಲು ಕಲಿಸಿದರು. ನಾವು ದೊಡ್ಡವರಾದ ಮೇಲೆ ಅವರ ಕೈ ಹಿಡಿದು ನಡೆಯಿಸುವುದು ನಮ್ಮ ಕರ್ತವ್ಯ. ಅವರು ನಮ್ಮ ಬಾಲ್ಯವನ್ನು ಸುಂದರಗೊಳಿಸಿದರು. ಅವರ ವಾರ್ಧಕ್ಯವನ್ನು ಸುಂದರಗೊಳಿಸುವುದು ನಮ್ಮ ಜವಾಬ್ದಾರಿ. ಅಮ್ಮ-ಅಪ್ಪರಿಗೆ ನಾವು ಏನೇ ಕೊಟ್ಟರೂ ಅದು ಅವರ ತ್ಯಾಗದ ಮುಂದೆ ಒಂದು ಹನಿ ನೀರಿನಷ್ಟೂ ಅಲ್ಲ. ಅವರ ಋಣವನ್ನು ನಾವು ಎಂದಿಗೂ ತೀರಿಸಲಾರೆವು. ಆದರೆ ಅವರ ಕಣ್ಣಲ್ಲಿ ಸಂತೋಷದ ಕಣ್ಣೀರು ತರಿಸುವ ಮಕ್ಕಳಾಗಿ ಬದುಕುವುದು ಮಾತ್ರ ನಮ್ಮ ಕೈಯಲ್ಲಿದೆ…
✍️ಬರಹ:-ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು