ಪಂಚ ಗ್ಯಾರಂಟಿ ಯೋಜನೆ ಬಡಜನರಿಗೆ ಆರ್ಥಿಕ ಶಕ್ತಿ ತುಂಬಿಸಿದೆ: ಪ್ರಸಾದ್ ರಾಜ್ ಕಾಂಚನ್

ಉಡುಪಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ‌ ಬಡಜನರಿಗೆ ಆರ್ಥಿಕ ಶಕ್ತಿ ತುಂಬಿಸುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಹೇಳಿದರು. ಬ್ರಹ್ಮಾವರ ಕೊಕ್ಕರ್ಣೆಯಲ್ಲಿ ಆಯೋಜಿಸಿದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ “ಪಂಚ ಗ್ಯಾರಂಟಿ ಯೋಜನೆ ಸಮಾವೇಶ”ದಲ್ಲಿ ಅವರು ಮಾತನಾಡಿದರು. ನಾನು ಸೋತವ, ವಿಧಾನಸಭೆಗೆ ಪ್ರವೇಶಿಸಲು ನನಗೆ ನೀವೇ ಅಧಿಕಾರ ಕೊಡಲಿಲ್ಲ. ಆದರೂ ಹೊಳೆಬೈಲಿನ ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದೆ. ನಾನು ಶೌಚಾಲಯ ನಿರ್ಮಿಸಿಕೊಡುವ ವಿಷಯ ಉಡುಪಿ ಶಾಸಕರಿಗೆ ಗೊತ್ತಾಗಿ, ಪ್ರಸಾದ್ ಹತ್ತಿರ ಹಣ ತೆಗೆದುಕೊಳ್ಳಬೇಡಿ ನಾವೇ ಶೌಚಾಲಯ ನಿರ್ಮಾಣ ಮಾಡ್ತೇವೆಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ರು. ಆದರೆ, ಮರಳು ಬಂದು ಬಿತ್ತೆ ವಿನಾಃ ಶೌಚಾಲಯ ಮಾತ್ರ ನಿರ್ಮಾಣ ಆಗಲೇ ಇಲ್ಲ. ಮತ್ತೆ ಗ್ರಾಮಸ್ಥರು ವಿನಂತಿ‌ ಮಾಡಿದರು. ಆಗ ನನ್ನ ಸ್ವಂತ ಖರ್ಚಿನಿಂದ ಹೊಳೆಬೈಲಿನಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದ್ದೇನೆ ಎಂದರು.


ಭಾರತ ದೇಶದ ಬಜೆಟ್ ಗಾತ್ರ 48.50 ಲಕ್ಷ ಕೋಟಿ ರೂ. ಅದರಲ್ಲಿ ಎಷ್ಟು ಸೊನ್ನೆ ಇದೆಯೆಂದು ಮೋದಿಗೆ ಗೊತ್ತಿರಲಿಕ್ಕಿಲ್ಲ. ಇದರಲ್ಲಿ ಎರಡು ಲಕ್ಷ ರೂ‌. ಅನುದಾನವನ್ನು ಕೋಟ ಶ್ರೀನಿವಾಸ ಪೂಜಾರಿಗೆ ಕೊಡಿಸಲು ಆಗುವುದಿಲ್ಲವೇ. 4 ಲಕ್ಷ ಕೋಟಿ ರೂ. ರಾಜ್ಯದ ಬಜೆಟ್ ಗಾತ್ರ. ಅದರಲ್ಲಿ ಎರಡು ಲಕ್ಷ ರೂ. ಅನುದಾನ ತರಲು ಉಡುಪಿ ಶಾಸಕರಿಗೆ ಆಗುವುದಿಲ್ಲವೇ?. ಹಾಗಿದ್ದರೆ ಇವರು ಯಾವ ಎಂಎಲ್ಎ. ಬಿಜೆಪಿಯ ಎಂಪಿ, ಎಂಎಲ್ಎಗಳು ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು. ಮುಂದಿನ‌ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುತ್ತೇವೆ ಎಂಬ ಗ್ಯಾರಂಟಿಯನ್ನು ನನಗೆ ಕೊಡಿ. ಆರು ತಿಂಗಳೊಳಗೆ ನಿಮ್ಮ ಗ್ರಾಮವನ್ನು ರಾಮರಾಜ್ಯವಾಗಿ ಮಾಡುತ್ತೇವೆ. ಇದು ನನ್ನ ವೈಯಕ್ತಿಕ ಗ್ಯಾರಂಟಿ ಎಂದು ಭರವಸೆ ನೀಡಿದರು.


ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಪಕ್ಷದವರು ಸಾಕಷ್ಟು ಅಪಪ್ರಚಾರ ನಡೆಸಿದರು. ಆದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ಜನರ ಬದುಕನ್ನು ಬದಲಿಸುವ ಕೆಲಸ ಮಾಡಿದೆ. ಮಹಿಳೆಯರಿಗೆ ಆರ್ಥಿಕ‌ ಶಕ್ತಿ ತುಂಬಿಸುವ ಕೆಲಸ ಮಾಡಿದೆ ಎಂದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು. ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮುಖಂಡರಾದ ಡಾ. ಸುನೀತಾ ಶೆಟ್ಟಿ, ಡಾ. ಸಂತೋಷ್ ಕುಮಾರ್ ಭೈರಂಪಳ್ಳಿ, ಸುದೇಶ್ ಶೆಟ್ಟಿ, ನಾರಾಯಣ ಮರಕಾಲ, ವೆಂಕಟೇಶ ಸುವರ್ಣ, ನರಸಿಂಹ ಪೂಜಾರಿ, ಕುಮಾರ್ ಸುವರ್ಣ, ಉದಯ ಆಚಾರ್ಯ, ಮಾಧವ ನಾಯ್ಕ್, ಅಬು ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!