ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ

Mangaluru: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ನಾರ್ತ್ ಪೊಲೀಸ್ ಸ್ಟೇಷನ್ ಠಾಣೆಯಲ್ಲಿ ದಾಖಲಾಗಿದ್ದ 1998ರ ಗಲಭೆ ಮತ್ತು ಬೆಂಕಿ ಹಚ್ಚಿದ ಪ್ರಕರಣದ ವಾರಂಟ್ ಆರೋಪಿ ಒಬ್ಬನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತನನ್ನು ಮುನೀರ್ ಅಹ್ಮದ್ (59) ಎಂದು ಗುರುತಿಸಲಾಗಿದೆ. ಇವರು ಅನ್ಸಾರಿ ಕ್ರಾಸ್ ರಸ್ತೆ, ಬಂದರು ನಿವಾಸಿಯಾಗಿದ್ದು, ಇತ್ತೀಚೆಗೆ ಕುಲಶೇಖರದಲ್ಲಿರುವ ಸಾಯಿ ಆರ್ಟ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಯ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 291/1998ರಡಿ ಭಾರತೀಯ ದಂಡ ಸಂಹಿತೆಯ ಕಲಂ 143, 147, 436, 149 ಅಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್.ಸಿ. ನಂ. 68/2024ರಂತೆ ವಿಚಾರಣೆಯಲ್ಲಿತ್ತು.

ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಪೊಲೀಸರಿಗೆ ಸಿಗದೆ ಓಡಾಡುತ್ತಿದ್ದ ಹಿನ್ನೆಲೆ ಮಾನ್ಯ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿತ್ತು.

ಆರೋಪಿಯ ಪತ್ತೆ ಕಾರ್ಯಾಚರಣೆ ಸಂಬಂಧ ರವೀಶ್ ನಾಯಕ್ ಅವರ ನಿರ್ದೇಶನದಂತೆ ಉತ್ತರ ಠಾಣೆಯ ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತಂಡದಲ್ಲಿ ಪಿಎಸ್‌ಐ ಫೈಝುನ್ನಿಸ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಅವರು ಏಪ್ರಿಲ್ 25, 2026ರಂದು ಕುಲಶೇಖರದಲ್ಲಿರುವ ಆರೋಪಿಯ ಬಾಡಿಗೆ ಮನೆಯಲ್ಲಿ ದಾಳಿ ನಡೆಸಿ ಬಂಧಿಸಿದರು.

ಬಂಧಿತನನ್ನು ಬಳಿಕ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!