ಮಂಗಳೂರು: ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಮಹಿಳೆಯರ ಶೇ. 33 ಮೀಸಲಾತಿಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ಮಹಿಳಾ ವಿರೋಧಿ ನೀತಿಯನ್ನು ಜಗಜ್ಜಾಹೀರುಗೊಳಿಸಿದೆ ಎಂದು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ತೀವ್ರವಾಗಿ ಕಿಡಿಕಾರಿದೆ. ಕಾಂಗ್ರೆಸ್‌ನ ಈ ಧೋರಣೆಯನ್ನು ಪ್ರತಿಭಟಿಸಿ ಬಿ.ವಿ.ಎಸ್ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸುವ ಮೂಲಕ ಬೃಹತ್ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, “ತೊಟ್ಟಿಲು ತೂಗುವ ಕೈಗಳು ದೇಶವನ್ನೂ ಆಳಬಲ್ಲವು ಎಂಬ ಸತ್ಯವನ್ನು ಪ್ರಧಾನಿ ಮೋದಿ ಅರಿತಿದ್ದಾರೆ. ಅದಕ್ಕಾಗಿಯೇ ಅವರು ʻನಾರಿ ಶಕ್ತಿ ವಂದನಾ ಮಸೂದೆ’ಯನ್ನು ತಂದಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಈ ಮಸೂದೆಗೆ ಅಡ್ಡಿಪಡಿಸುವ ಮೂಲಕ ದೇಶದ ಕೋಟ್ಯಂತರ ಮಹಿಳೆಯರಿಗೆ ಅಪಮಾನ ಎಸಗಿವೆ” ಎಂದು ಗುಡುಗಿದರು.
“ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಸದಸ್ಯ ಸ್ಥಾನಗಳನ್ನು 42ಕ್ಕೆ ಏರಿಸುವ ಮೂಲಕ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಐತಿಹಾಸಿಕ ಅವಕಾಶವಿತ್ತು. ಆದರೆ ಕಾಂಗ್ರೆಸ್ ಈ ಮಸೂದೆಯನ್ನು ತಡೆಹಿಡಿದು ಮಹಿಳೆಯರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಸಂಚು ರೂಪಿಸಿದೆ. ಮೀಸಲಾತಿ ಸಿಗದಿರುವುದಕ್ಕೆ ಸಂಭ್ರಮಿಸುತ್ತಿರುವ ಕಾಂಗ್ರೆಸ್‌ನ ವಿಕೃತ ಮನಸ್ಥಿತಿಯನ್ನು ಜನತೆ ಗಮನಿಸುತ್ತಿದ್ದಾರೆ” ಎಂದು ಪೂರ್ಣಿಮಾ ಅವರು ತೀಕ್ಷ್ಣವಾಗಿ ಟೀಕಿಸಿದರು.
ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್ ಮಾತನಾಡಿ, “ಡಿಜಿಟಲ್ ಪೇಮೆಂಟ್, ತ್ರಿವಳಿ ತಲಾಕ್ ನಿಷೇಧ, ಸಮಾನ ನಾಗರಿಕ ಸಂಹಿತೆಯಂತಹ ದೇಶದ ಹಿತದೃಷ್ಟಿಯ ಪ್ರತಿಯೊಂದು ಸುಧಾರಣೆಗಳಿಗೂ ಅಡ್ಡಿಪಡಿಸುವುದೇ ಕಾಂಗ್ರೆಸ್‌ನ ಹುಟ್ಟುಗುಣವಾಗಿದೆ. ಈಗ 33% ಮಹಿಳಾ ಮೀಸಲಾತಿಗೂ ಅಡ್ಡಗಾಲು ಹಾಕುವ ಮೂಲಕ ತಾವು ಎಂದಿಗೂ ಮಹಿಳಾ ವಿರೋಧಿಗಳು ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ, ಮಹಿಳೆಯರ ಹಕ್ಕುಗಳ ಪರವಾಗಿ ಧ್ವನಿ ಎತ್ತಿದರು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸಹಿತ ಹಲವರು ಸಾಥ್ ನೀಡಿದರು.