ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ₹10.61 ಕೋಟಿ ನಿವ್ವಳ ಲಾಭ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2025-26ನೇ ಸಾಲಿನಲ್ಲಿ ₹10.61 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಲಿನಲ್ಲಿ ಒಕ್ಕೂಟವು ₹1,270 ಕೋಟಿ ಆರ್ಥಿಕ ವ್ಯವಹಾರ ನಡೆಸಿದ್ದು, ಕಳೆದ ವರ್ಷದ ₹1,174 ಕೋಟಿಯೊಂದಿಗೆ ಹೋಲಿಸಿದರೆ ಶೇ.8.18ರಷ್ಟು ಬೆಳವಣಿಗೆ ದಾಖಲಿಸಲಾಗಿದೆ ಎಂದರು.

ಒಕ್ಕೂಟವು ಒಟ್ಟು 51,693 ಸಕ್ರಿಯ ಸದಸ್ಯರನ್ನು ಹೊಂದಿದ್ದು, ದಿನಕ್ಕೆ ಸರಾಸರಿ 4.07 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಲು ಶೇಖರಣೆಯಲ್ಲಿ ಶೇ.19ರಷ್ಟು ಏರಿಕೆ ಕಂಡುಬಂದಿದೆ ಎಂದು ಅವರು ತಿಳಿಸಿದರು.

ಹಾಲು ಉತ್ಪಾದಕರಿಗೆ ಲೀಟರ್‌ಗೆ ₹1.50 ಪ್ರೋತ್ಸಾಹಧನ ನೀಡಲಾಗುತ್ತಿದ್ದು, 2026 ಫೆಬ್ರವರಿ 21ರಿಂದ ಮಾರ್ಚ್ 31ರವರೆಗೆ ಹೆಚ್ಚುವರಿ ₹1 ಸೇರಿಸಿ ಒಟ್ಟು ₹2.50 ಪ್ರೋತ್ಸಾಹಧನ ನೀಡಲಾಗಿದೆ. ಈ ಮೂಲಕ ಒಟ್ಟು ₹23.99 ಕೋಟಿ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದರು.

ಹೈನುಗಾರಿಕೆಗೆ ಉತ್ತೇಜನ ನೀಡಲು ಮಿನಿ ಡೇರಿ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್, ವಾಣಿಜ್ಯ ಡೇರಿ ಘಟಕ, ಹಸಿರು ತಾಕು, ರಾಸು ಖರೀದಿ ಮತ್ತು ಕರು ಸಾಕಾಣಿಕೆ ಯೋಜನೆಗಳಿಗೆ ಒಟ್ಟು ₹6.64 ಕೋಟಿ ಅನುದಾನ ನೀಡಲಾಗಿದೆ. 2026-27ನೇ ಸಾಲಿನಲ್ಲಿ ಕಡಸು ಅಭಿವೃದ್ಧಿ ಯೋಜನೆಗೆ ₹60 ಲಕ್ಷ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಒಕ್ಕೂಟದ ವ್ಯಾಪ್ತಿಯಲ್ಲಿ 1,781 ಡೀಲರ್‌ಗಳು, 42 ಪಾರ್ಲರ್‌ಗಳು, 91 ಫ್ರಾಂಚೈಸಿಗಳು ಮತ್ತು 15 ಟಿಸಿಡಿಗಳ ಮೂಲಕ ದಿನಕ್ಕೆ 3,87,360 ಲೀಟರ್ ಹಾಲು ಸೇರಿದಂತೆ ವಿವಿಧ ಹಾಲು ಉತ್ಪನ್ನಗಳ ಮಾರಾಟದಿಂದ ಸುಮಾರು ₹3.03 ಕೋಟಿ ದಿನಸಿ ವ್ಯವಹಾರ ನಡೆಯುತ್ತಿದೆ ಎಂದರು.

ನವೀನ ತಂತ್ರಜ್ಞಾನ ಅಳವಡಿಕೆಗೆ ₹12.81 ಕೋಟಿ ವೆಚ್ಚದಲ್ಲಿ ಹೊಸ ಗೋದಾಮು, ಐಸ್‌ಕ್ರೀಂ ಕೋಲ್ಡ್ ಸ್ಟೋರೇಜ್ ಹಾಗೂ ನವೀಕರಿಸಿದ ಶೀತೀಕರಣ ಘಟಕ ನಿರ್ಮಿಸಲಾಗಿದೆ. ಮಂಗಳೂರು ಕೇಂದ್ರ ಕಚೇರಿಯಲ್ಲಿ ₹7 ಕೋಟಿ ವೆಚ್ಚದ ಗೋದಾಮು ಹಾಗೂ ಉಡುಪಿ ಡೇರಿಯಲ್ಲಿ ₹4.25 ಕೋಟಿ ವೆಚ್ಚದ ಆಡಳಿತ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಈ ವರ್ಷ ಉದ್ಘಾಟನೆಗೊಳ್ಳಲಿದೆ ಎಂದರು.

ಮುಂದಿನ ಯೋಜನೆಗಳಾಗಿ ಮೆಗಾ ಡೇರಿ, ಐಸ್‌ಕ್ರೀಂ ಪ್ಲಾಂಟ್, ಪನೀರ್ ಘಟಕ ಮತ್ತು ನೀರು ಬಾಟ್ಲಿಂಗ್ ಘಟಕ ಸ್ಥಾಪನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಸುಚರಿತ ಶೆಟ್ಟಿ, ನಿರ್ದೇಶಕರಾದ ಚಂದ್ರ ಶೇಖರ,ಮಮತಾ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಿ. ವಿವೇಕ್, ಡಿ. ವಿವೇಕ್, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕರಾದ ರವಿರಾಜ ಉಡುಪ ಸಹಿತ ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!