ಧಾರ್ಮಿಕ ತ್ಯಾಜ್ಯವನ್ನು ಗೌರವಯುತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ರಾಮಕೃಷ್ಣ ಮಿಷನ್, ರಾಮಕೃಷ್ಣ ಮಠ ಹಾಗೂ ಸ್ವಚ್ಛ ಮಂಗಳೂರು ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದ “ವಿಸರ್ಜನೆ ಅಭಿಯಾನ”ದಲ್ಲಿ ₹1 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳ್ಳಿ, ತಾಮ್ರ ಹಾಗೂ ಹಿತ್ತಾಳೆ ಲೋಹಗಳು ಲಭಿಸಿದ್ದು, ಅವುಗಳನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಧಾರ್ಮಿಕ ತ್ಯಾಜ್ಯ ವಿಲೇವಾರಿಯ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಾರ್ಚ್ 15ರಂದು ರಾಮಕೃಷ್ಣ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಯಾನದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳನ್ನು ವಿವರಿಸಲಾಗಿದ್ದು, ಮನೆಗಳಲ್ಲಿ ಸಂಗ್ರಹವಾಗಿರುವ ಪೂಜಾ ಸಾಮಗ್ರಿಗಳು, ದೇವರ ಫೋಟೋಗಳು ಮತ್ತು ಧಾರ್ಮಿಕ ವಸ್ತುಗಳ ವಿಲೇವಾರಿಯಲ್ಲಿ ಜನರು ಎದುರಿಸುತ್ತಿದ್ದ ಗೊಂದಲವೇ ಈ ಅಭಿಯಾನಕ್ಕೆ ಕಾರಣವಾಯಿತು ಎಂದು ಹೇಳಿದರು.
ಸ್ವಚ್ಛತಾ ಕಾರ್ಯಾಚರಣೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಜಿಸಲಾದ ಧಾರ್ಮಿಕ ವಸ್ತುಗಳ ಪ್ರಮಾಣ ಹೆಚ್ಚುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ, ಅವುಗಳನ್ನು ಗೌರವಪೂರ್ವಕವಾಗಿ ಹಾಗೂ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಅಗತ್ಯವೆಂಬುದು ಸ್ಪಷ್ಟವಾಯಿತು.
ಈ ಹಿನ್ನಲೆಯಲ್ಲಿ ನಗರದ ಐದು ಪ್ರಮುಖ ಸ್ಥಳಗಳಲ್ಲಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಫಿಜಾ ಬೈ ನೆಕ್ಸಸ್ ಮಾಲ್, ಸಿಟಿ ಸೆಂಟರ್ ಮಾಲ್ ಹಾಗೂ ಗೋವಿಂದದಾಸ್ ಕಾಲೇಜುಗಳಲ್ಲಿ ನಾಗರಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಯಿತ್ತೆಂದು ತಿಳಿಸಿದರು .
ಇನ್ನು ಕದ್ರಿ ದೇವಸ್ಥಾನದ ಟ್ರಸ್ಟಿಗಳಾಗಿರುವ ದಿಲ್ ರಾಜ್ ಆಳ್ವ ಮಾತನಾಡಿ , ಮಾರ್ಚ್ 16ರಿಂದ 26ರವರೆಗೆ ನಡೆದ ಸಂಗ್ರಹ ಕಾರ್ಯದಲ್ಲಿ ಸುಮಾರು 12.5 ಟನ್‌ಗಿಂತ ಹೆಚ್ಚು ಧಾರ್ಮಿಕ ವಸ್ತುಗಳು ಹಾಗೂ ದೇವರ ಫೋಟೋಗಳು ಸಂಗ್ರಹವಾಗಿದ್ದು ನಂತರ, ಈ ತ್ಯಾಜ್ಯವನ್ನು 9 ವಿಭಾಗಗಳಲ್ಲಿ ವೈಜ್ಞಾನಿಕವಾಗಿ ವಿಂಗಡಿಸಲಾಯಿತು. ಇದರಲ್ಲಿ ಸುಮಾರು 15,000 ದೇವರ ಫೋಟೋ ಪ್ರೇಮ್‌ಗಳು (4500 ಕೆಜಿ), ಮೂರ್ತಿಗಳು ಮತ್ತು ಸ್ಮರಣಿಕೆಗಳು (2500 ಕೆಜಿ), ಕಾಗದ ಮತ್ತು ಪುಸ್ತಕಗಳು (1500 ಕೆಜಿ), ಮರುಬಳಕೆ ಆಗದ ವಸ್ತುಗಳು (1200 ಕೆಜಿ), ಕುಂಕುಮ ಮತ್ತು ಪ್ರಸಾದ (800 ಕೆಜಿ), ಪ್ಲಾಸ್ಟಿಕ್ (700 ಕೆಜಿ), ಲೋಹ ವಸ್ತುಗಳು (500 ಕೆಜಿ), ಮರದ ವಸ್ತುಗಳು (500 ಕೆಜಿ), ಹಾಗೂ ಬಟ್ಟೆ (300 ಕೆಜಿ) ಸೇರಿವೆ. 10 ಸಂಸ್ಥೆಗಳ 450ಕ್ಕೂ ಹೆಚ್ಚು ಸ್ವಯಂಸೇವಕರು, ಸುಮಾರು 2250 ಗಂಟೆಗಳ ಶ್ರಮದಾನದ ಮೂಲಕ ಈ ಕಾರ್ಯದಲ್ಲಿ ಭಾಗವಹಿಸಿದರು ಎಂದರು.
ಸಂಗ್ರಹಗೊಂಡ ಪೂಜಾ ಸಾಮಗ್ರಿಗಳಲ್ಲಿ ಬೆಳ್ಳಿ, ತಾಮ್ರ ಮತ್ತು ಹಿತ್ತಾಳೆ ವಸ್ತುಗಳೂ ಇದ್ದು, ಪರಿಣಿತರ ಸಹಾಯದಿಂದ ಅವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಕರಗಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಸುಮಾರು 243 ಗ್ರಾಂ ಬೆಳ್ಳಿ, 22 ಕೆಜಿ ಹಿತ್ತಾಳೆ ಮತ್ತು 4 ಕೆಜಿ ತಾಮ್ರ ಲಭಿಸಿದ್ದು, ಇದರ ಮೌಲ್ಯ ₹1 ಲಕ್ಷಕ್ಕೂ ಅಧಿಕವಾಗಿದೆ ಎಂದು ತಿಳಿದು ಬಂದಿದೆ ಎಂದರು .
ಮಂಗಳೂರಿನ ನಗರದಲ್ಲಿ ಈ ರೀತಿಯ ಯೋಜನೆಯನ್ನು ಮಾಡುವ ಉದ್ದೇಶ ಇದ್ದು ಅದನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುವುದೆಂದರು .
ಈ ಸಂದರ್ಭದಲ್ಲಿ ಕದ್ರಿ ದೇವಸ್ಥಾನದ ಟ್ರಸ್ಟಿಗಳಾದ ರಾಜೇಂದ್ರ ಚಿಲಿಂಬಿ, ಕಿರಣ್ ಕುಮಾರ್, ಉಷಾ ಪ್ರಭಾಕರ್, ಪ್ರೀತಾ ನಂದನ್ . ಸ್ವಚ್ಚ ಮಂಗಳೂರು ಇದರ ಸದಸ್ಯರಾದ ರಂಜನ್ ಬೆಳ್ಳರ್ಪಾಡಿ, ಕಮಲಾಕ್ಷ ಪೈ, ಅನಿರುದ್ಧ ನಾಯಕ್, ಯೋಗೇಶ್ ಕಾರ್ಯತಡ್ಕ, ಉದಯ್ ಕೆ ಪಿ, ಸೌರಜ್ ಮಂಗಳೂರು, ಅಭಿ ಕಾರ್ಕಳ, ಸುನಂದಾ ಶಿವರಾಮ್, ರಾಜೀವಿ ಚಂದ್ರಶೇಖರ್, ಸಚಿನ್ ಶೆಟ್ಟಿ, ನವನೀತ್ ಶೆಟ್ಟಿ, ಪ್ರಜ್ವಲ್, ಪ್ರಥಮ್ ಸಹಿತ ಮುಂತಾದವರು ಉಪಸ್ಥಿತರಿದ್ದರು .