ಮಂಗಳೂರು:ನಗರದ ಮಿಲಾಗ್ರಿಸ್ ಕಾಲೇಜು, ಐಸಿವೈಎಂ (ICYM) ಮಂಗಳೂರು ಧರ್ಮಪ್ರಾಂತ್ಯ ಹಾಗೂ ಮಂಗಳೂರು ರನ್ನರ್ಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ನಗರ ಮಟ್ಟದ ಬೃಹತ್ ಮ್ಯಾರಥಾನ್ “Apex Run 2026” ಇದೇ ಮೇ 10ರಂದು ನಡೆಯಲಿದೆ. ಮುಂಜಾನೆ 5 ಗಂಟೆಗೆ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಓಟಕ್ಕೆ ಚಾಲನೆ ನೀಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಲ್ವಿನ್ ಸೆರಾವೊ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೈಹಿಕ ಕ್ಷಮತೆ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಯುವಜನರಲ್ಲಿ ಸಮುದಾಯ ಒಗ್ಗಟ್ಟನ್ನು ಬೆಳೆಸುವ ಉದ್ದೇಶದಿಂದ ಮ್ಯಾರಥಾನ್ ಆಯೋಜಿಸಲಾಗಿದೆ ಎಂದರು. ಸುಮಾರು 176 ವರ್ಷಗಳ ಇತಿಹಾಸ ಹೊಂದಿರುವ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆ ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿದ್ದು, ಈ ಬಾರಿ ಸುಮಾರು 2,500ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.
ಮ್ಯಾರಥಾನ್ ಅನ್ನು 3 ಕಿ.ಮೀ, 5 ಕಿ.ಮೀ ಮತ್ತು 10 ಕಿ.ಮೀ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ನೋಂದಣಿ ಶುಲ್ಕವಾಗಿ 3 ಕಿ.ಮೀಗೆ ₹250, 5 ಕಿ.ಮೀಗೆ ₹350 ಹಾಗೂ 10 ಕಿ.ಮೀಗೆ ₹450 ನಿಗದಿಪಡಿಸಲಾಗಿದೆ. 5 ಮತ್ತು 10 ಕಿ.ಮೀ ವಿಭಾಗಗಳ ವಿಜೇತರಿಗೆ ಪ್ರಥಮ ಬಹುಮಾನವಾಗಿ ₹5,000 ಮತ್ತು ದ್ವಿತೀಯ ಬಹುಮಾನವಾಗಿ ₹3,000 ನಗದು ಜೊತೆಗೆ ಟ್ರೋಫಿ ನೀಡಲಾಗುವುದು. ಭಾಗವಹಿಸುವ ಪ್ರತಿಯೊಬ್ಬರಿಗೂ ಟಿ-ಶರ್ಟ್, ಫಿನಿಷರ್ ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು.
ಕಾರ್ಯಕ್ರಮದ ಪ್ರಚಾರದ ಅಂಗವಾಗಿ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ರೀಲ್ಸ್‌ಗೆ ₹10,000 ನಗದು ಬಹುಮಾನ ಘೋಷಿಸಲಾಗಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವ ಸಂಸ್ಥೆ ಅಥವಾ ಸಂಘಟನೆಗೆ ವಿಶೇಷ ಟ್ರೋಫಿ ನೀಡಲಾಗುವುದು. ಸ್ಪರ್ಧಾಳುಗಳ ಸುರಕ್ಷತೆಗೆ ಮಾರ್ಗದುದ್ದಕ್ಕೂ ಕುಡಿಯುವ ನೀರು, ವೈದ್ಯಕೀಯ ನೆರವು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
“ಮಿತಿಗಳನ್ನು ಮೀರಿ ಓಡಿ” ಎಂಬ ಸಂದೇಶದೊಂದಿಗೆ ನಡೆಯಲಿರುವ ಈ ಮ್ಯಾರಥಾನ್‌ಗೆ ಆಸಕ್ತರು ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಅಪೆಕ್ಸ್ 2026 ಸಂಯೋಜಕ ಕ್ಲೈಡ್ ಡಿಸೋಜಾ, ಐಸಿವೈಎಂ ಮಂಗಳೂರು ಡಯಾಸಿಸ್ ಅಧ್ಯಕ್ಷ ವಿಜೊಯ್ ಕರ್ಡೊಝ್, ಕಾರ್ಯದರ್ಶಿ ಮರಿಯ ಡಿ ಸಿಲ್ವಾ, ಜೊತೆ ಕಾರ್ಯದರ್ಶಿ ಫ್ಲಾಯ್ಡ್ ಪಿಂಟೋ, ಉಪನ್ಯಾಸಕರಾದ ಡೆನ್ಸಿಲ್ ಡಿಕೋಸ್ಟಾ ಹಾಗೂ ಮಮತಾ ಶೆಟ್ಟಿ ಉಪಸ್ಥಿತರಿದ್ದರು.