ವಿಟ್ಲ: ಅಭಿವೃದ್ಧಿ ಶುಲ್ಕ ಜಾರಿ ವಿರುದ್ಧ ಸ್ಪಷ್ಟ ನಿರ್ಣಯ: ನೆಲದಲ್ಲೇ ಧರಣಿ ಕುಳಿತ ಸದಸ್ಯರು

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಹೊಸ ಬೈಲಾದಂತೆ ಅಭಿವೃದ್ಧಿ ಶುಲ್ಕ ವಿಧಿಸಲು ಸುತ್ತೋಲೆ ಬಂದಿದ್ದು, ಇದನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸ ಬಾರದು, ಬಡಜನರ ಮೇಲೆ ತುಂಬಲಾರದ ಹೊರೆಯಾಗಿರುವ, ಅಭಿವೃದ್ಧಿ ಶುಲ್ಕ ಜಾರಿಗೊಳಿಸುವ ಸ್ಪಷ್ಟ ನಿರ್ಣಯ ತಿಳಿಸದೇ ಸಾಮಾನ್ಯ ಸಭೆ ನಡೆಸ ಬಾರದೆಂದು ಪಟ್ಟು ಹಿಡಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಭಾಂಗಣದ ನೆಲದಲ್ಲಿಯೇ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ವಾರದೊಳಗೆ ಸ್ಪಷ್ಟ ಮಾಹಿತಿ ನೀಡುತ್ತೇವೆ ಎಂದು ಹಲವಾರು ಬಾರಿ ಕೇಳಿಕೊಂಡರು. ಆದರೆ ಇದಕ್ಕೆ ಜಗ್ಗದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಭಾಂಗಣದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕೆಲ ಹೊತ್ತು ಸಭೆ ನಡೆಯದೇ ಧಿಕ್ಕಾರ ಕೂಗಿನಲ್ಲಿಯೇ ಮುಂದುವರಿಯಿತು. ಅಂತೂ ಕೊನೆಗೂ ಮುಂದಿನ ಬುಧವಾರದೊಳಗೆ ಸ್ಪಷ್ಟನೆ ನೀಡುತ್ತೇವೆ ಎಂಬ ಅಧ್ಯಕ್ಷರ ಭರವಸೆಯ ಬಳಿಕ ಪ್ರತಿಭಟನೆ ಹಿಂತೆಗೆದು ಕೊಂಡರು. ಪ್ರತಿಭಟನೆಯಲ್ಲಿ ಪ್ರತಿಪಕ್ಷದ ವಿಕೆಎಂ ಅಶ್ರಫ್, ಅಬ್ದುಲ್ ರಹಿಮಾನ್ ಹಸೈನಾರ್, ಡೀಕಯ್ಯ ಸುರುಳಿಮೂಲೆ, ಸುನೀತಾ, ಪದ್ಮಿನಿ, ಲತಾ ಅಶೋಕ್ ಪೂಜಾರಿ, ನಾಮನಿರ್ದೇಶನ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಶ್ರೀನಿವಾಸ ಶೆಟ್ಟಿ ಕೊಲ್ಯ ಪಾಲ್ಗೊಂಡರು.

ವಿಟ್ಲ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಸಂತೆ ಟೆಂಡರ್ ಪಡೆದ ಮಹೇಶ್ ದಾಸ್ ಜಾತ್ರೆಗದ್ದೆಯಲ್ಲಿ ಅಂಗಡಿ ಹಾಕಿದವರಿಂದ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಸಭೆಯಲ್ಲಿ ಸ್ಪಷ್ಟನೆ ನೀಡಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷಗಳ ಒಮ್ಮತದ ನಿರ್ಣಯದಂತೆ ಏಲಂ ಪ್ರಕ್ರಿಯೆ ನಡೆದಿದ್ದು ಎಲ್ಲವೂ ಪಾರದರ್ಶಕವಾಗಿದೆ ಎಂದರು. ಟೆಂಡರ್ ಪಡೆದ ವ್ಯಕ್ತಿ ಹೆಚ್ಚುವರಿ ಹಣ ವಸೂಲಿ ಮಾಡಿದ ಬಗ್ಗೆ ಸಂತೆ ವ್ಯಾಪಾರಿಯೋರ್ವರು ನೀಡಿದ್ದರು. ಹಣ ಪಡೆದ ಮತ್ತು ನೀಡಿದ ಬಗ್ಗೆ ದಾಖಲೆಗಳೊಂದಿಗೆ ವಿಚಾರಣೆಗೆ ಬರಲು ಹೇಳಿದ್ದೆವು. ಆದರೆ ಅವರ ಕಡೆಯಿಂದ ಲೋಪವಾಗಿದ್ದರೂ ಸಹ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಸಂಗೀತ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಅರುಣ ವಿಟ್ಲ, ಹರೀಶ್ ಸಿ. ಹೆಚ್, ಸಿ.ಹೆಚ್.ಜಯಂತ, ರಕ್ಷಿತಾ, ಕೆ. ವಸಂತ, ವಿಜಯಲಕ್ಷ್ಮಿ, ಶಾಕಿರ, ರವಿಪ್ರಕಾಶ್ ಎಸ್, ಎನ್. ಕೃಷ್ಣ, ಸಿಬ್ಬಂದಿಗಳು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!