ಮೆಸ್ಕಾಂ ಸರ್ವರ್ ಸಮಸ್ಯೆ: ವಾರದಲ್ಲಿ ಪರಿಹಾರ ಇಲ್ಲದಿದ್ದರೆ ಕಚೇರಿ ಚಲೋ ಹೋರಾಟ

ಮೆಸ್ಕಾಂನ ಸರ್ವರ್ ಮತ್ತು ಎನ್-ಸೋಫ್ಟ್ ಸಮಸ್ಯೆಯಿಂದ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಸಂಕಷ್ಟಕ್ಕೀಡಾಗಿರುವುದಾಗಿ ಆರೋಪಿಸಿರುವ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ವಾರದೊಳಗೆ ಸಮಸ್ಯೆ ಪರಿಹರಿಸದಿದ್ದರೆ ಮೆಸ್ಕಾಂ ಕಚೇರಿ ಚಲೋ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.

ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಕುಶಾಲ್ ಪೂಜಾರಿ, ಮೆಸ್ಕಾಂನ ಅವ್ಯವಸ್ಥೆಯಿಂದ ಹೊಸದಾಗಿ ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗದೆ ಸಾವಿರಾರು ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜನರು ಕಷ್ಟಪಟ್ಟು ಮನೆ ನಿರ್ಮಿಸಿಕೊಂಡು ಗೃಹಪ್ರವೇಶಕ್ಕೆ ಸಿದ್ಧರಾಗಿರುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ದೊರೆಯದೆ ವಿಳಂಬವಾಗುತ್ತಿದೆ. ಇದರಿಂದ ಗ್ರಾಹಕರು ಮಾನಸಿಕವಾಗಿ ನೊಂದಿರುವುದರ ಜೊತೆಗೆ, ವಿದ್ಯುತ್ ಜೋಡಣೆಗಾಗಿ ಗುತ್ತಿಗೆದಾರರು ಸ್ವಂತ ಹಣದಲ್ಲಿ ಕೆಲಸ ಪೂರ್ಣಗೊಳಿಸಿದ್ದರೂ, ಸಂಪರ್ಕ ವಿಳಂಬದಿಂದ ಗ್ರಾಹಕರು ಹಣ ಪಾವತಿಸದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ನೂರಾರು ಗುತ್ತಿಗೆದಾರರಿಗೆ ಲಕ್ಷಾಂತರ ರೂಪಾಯಿ ಬಾಕಿಯಿದ್ದು, ಅವರ ಜೀವನೋಪಾಯಕ್ಕೂ ಧಕ್ಕೆಯಾಗಿದೆ ಎಂದು ಹೇಳಿದರು.

ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿತನ ಮತ್ತು ಅವ್ಯವಸ್ಥೆಯಿಂದ ಗ್ರಾಹಕರು, ಜನಸಾಮಾನ್ಯರು ಹಾಗೂ ಗುತ್ತಿಗೆದಾರರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಕುರಿತು ಹಲವು ಬಾರಿ ಮೆಸ್ಕಾಂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು ,

ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ , ಮುಂದಿನ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರು ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಕರು, ಮಹಿಳೆಯರು, ದಲಿತ-ಆದಿವಾಸಿ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಸಂಘಟನೆಗಳೊಂದಿಗೆ ಮೆಸ್ಕಾಂ ಕಚೇರಿ ಚಲೋ ಹೋರಾಟವನ್ನು ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ , ರಾಜ್ಯ ಸಮಿತಿಯ ಮಾಜಿ ಉಪಾಧ್ಯಕ್ಷ ಉರ್ಬನ್ ಪಿಂಟೋ, ಸಂಘದ ಕಾರ್ಯದರ್ಶಿ ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿ ಯೂಸುಫ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!