ಬಂಟ್ವಾಳದಲ್ಲಿ ಮೇ 4ರಿಂದ ಕರಾವಳಿ ಕಲೋತ್ಸವ–2026: ಬಹುಸಂಸ್ಕೃತಿ ಉತ್ಸವ, ಆಹಾರ ಮೇಳಕ್ಕೆ ಸಜ್ಜು

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ, ಚಿಣ್ಣರಲೋಕ ಸೇವಾ ಬಂಧು (ರಿ) ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಲೋತ್ಸವ 2026 ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಅಕಾಡೆಮಿ ಸಹಯೋಗದೊಂದಿಗೆ ಬಹುಸಂಸ್ಕೃತಿ ಉತ್ಸವ ಮತ್ತು ಆಹಾರ ಮೇಳ ಮೇ 4ರಿಂದ 9ವರೆಗೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.

ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು ಅವರು ಗುರುವಾರ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸ್ಥಾಪಕಾಧ್ಯಕ್ಷ ಮೋಹನದಾಸ ಕೊಟ್ಟಾರಿ ಮುನ್ನೂರು ಮಾತನಾಡಿ, ಕೀರ್ತಿಶೇಷ ಬಿ.ಎ.ಅಹ್ಮದ್ ಹಾಜಿ ಕಲಾವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಹಾರ ಮೇಳ ವಿಶೇಷವಾಗಿ ಇರಲಿದೆ. ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಬಾರಿ ಮಹಿಳೆಯರಿಗೆ ಸೀರೆ ನಡಿಗೆ ಸ್ಪರ್ಧೆ ನಡೆಯಲಿದೆ. ಇದನ್ನು ಗೇರು ಅಭಿವೃದ್ಧಿ ನಿಗತಮ ಅಧ್ಯಕ್ಷೆ ಮಮತಾ ಗಟ್ಟಿ ಉದ್ಘಾಟಿಸುವರು, 4ರಂದು ಸೋಮವಾರ ಶಂಜೆ 5 ಗಂಟೆಗೆ ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಸ್ಪರ್ಶ ಕಲಾ ಮಂದಿರದವರೆಗೆ ಜಾನಪದ ದಿಬ್ಬಣ ನಡೆಯಲಿದೆ ಅಂದು ಸಂಜೆ 7ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಆಹಾರ, ವಸ್ತು ಪ್ರದರ್ಶನ, ಪುಸ್ತಕ ಮಳಿಗೆಗಳು ಇರಲಿವೆ ಎಂದರು.


ಆಡಳಿತ ಟ್ರಸ್ಟಿ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ, ಕರಾವಳಿ ಸೌರಭ ರಾಜ್ಯಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತ ಎಲಿಯಾಸ್ ಸ್ಯಾಕ್ಟಿಸ್ ಅವರಿಗೆ, ಉದಯ ಚೌಟ ಸಾಧನಾ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಕಬಡ್ಡಿ ಪಟು ರೋಹಿತ್ ಮಾರ್ಲ ಅವರಿಗೆ, ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿಯನ್ನು ಸಾನ್ವಿ ಕೆ. ಅವರಿಗೆ ನೀಡಿ ಗೌರವಿಸಲಾಗುವುದು. ದತ್ತು ಸ್ವೀಕರಿಸಿದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಸಂಸ್ಥೆಯಲ್ಲಿ ತರಬೇತು ಪಡೆಯುವ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಉದ್ಘಾಟನಾ ದಿನ ಚಿಣ್ಣರಲೋಕದ ಯಕ್ಷಗಾನ ಗುರು ಓಂ ಪ್ರಕಾಶ್ ರೈ ಕಲ್ಲಡ್ಕ ಅವರ ಶಿಷ್ಯವೃಂದದಿಂದ ಶ್ರೀರಾಮದರ್ಶನ ಯಕ್ಷಗಾನ ನಡೆಯಲಿದೆ ಎಂದರು.
ಮೇ 5ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ತುಳು ಸಾಹಿತ್ಯ ಸಂಭ್ರಮ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆಯೊಂದಿಗೆ ನಡೆಯಲಿದೆ. ಈ ವೇಳೆ ತುಳುನಾಡ ಸೌಹಾರ್ದತೆ ತುಳು ಕವಿಗೋಷ್ಠಿ ಇರಲಿದೆ. 6ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ ಉಮೇಶ್ ಕುಮಾರ್ ವೈ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅಂದು ಅರೆಭಾಷೆ ಕವಿಗೋಷ್ಠಿ ನಡೆಯಲಿದೆ. 7ರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಬ್ಯಾರಿ ಸಾಹಿತ್ಯ ಸಂಭ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಅಬ್ದುಲ್ ರಝಾಕ್ ಕುಕ್ಕಾಜೆ ವಹಿಸುವರು. ಬ್ಯಾರಿ ಕವಿಗೋಷ್ಠಿ, ದಫ್, ರಸಮಂಜರಿ ಅಂದು ಇರಲಿದೆ. 8ರಂದು ಕೊಂಕಣಿ ಸಾಹಿತ್ಯ ಸಂಭ್ರ,ಮ ಪಿಯೂಸ್ ಎಲ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. 9ರಂದು ತೀರ್ಥಪ್ರಸಾದ್ ಅನಂತಾಡಿ ಸ್ಮರಣಾರ್ಥ ಕರಾವಳಿ ಸರಿಗಮಪ ರಾಜ್ಯಮಟ್ಟದ ಸಂಗೀತ ಸ್ಪರ್ಧೆ ನಡೆಯಲಿದೆ. ಸಂಜೆ ಸಮಾರೋಪ ನಡೆಯುವುದು ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ, ಹಿರಿಯ ನ್ಯಾಯವಾದಿ ಪಿ.ಜಯರಾಮ ರೈ, ತುಳು ಸಾಹಿತ್ಯ ಸಂಭ್ರಮ ಅಧ್ಯಕ್ಷ ಬೇಬಿ ಕುಂದರ್, ಬ್ಯಾರಿ ಸಾಹಿತ್ಯ ಸಂಭ್ರಮ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ಗೌರವ ಸಲಹೆಗಾರ ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!