ಬೆಲೆ ಏರಿಕೆ, ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಬಿ.ಸಿ.ರೋಡಿನಲ್ಲಿ SDPI ಪ್ರತಿಭಟನೆ

ಬಂಟ್ವಾಳ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳವನ್ನು ಖಂಡಿಸಿ, ಬೆಲೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, “ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಒಂದು ಕೈಯಿಂದ ಹಣ ನೀಡಿ, ಮತ್ತೊಂದು ಕೈಯಿಂದ ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿರುವುದು ಯಾವ ನ್ಯಾಯ? ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ತನ್ನ ಪಕ್ಷದ ಖಜಾನೆಯಿಂದಾಗಲಿ, ಶಾಸಕರ ವೈಯಕ್ತಿಕ ಆದಾಯದಿಂದಾಗಲಿ ನೀಡುತ್ತಿಲ್ಲ. ಅದು ಜನರು ಕಟ್ಟುವ ತೆರಿಗೆ ಹಣದಿಂದಲೇ ನೀಡುತ್ತಿರುವುದು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಜನರ ಹಣವನ್ನೇ ಜನರಿಗೆ ಸೌಲಭ್ಯವಾಗಿ ನೀಡಿ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಅದೇ ಜನರ ಜೇಬಿಗೆ ಹೊರೆ ಹಾಕುವುದು ಯಾವ ನ್ಯಾಯ?” ಎಂದು ಪ್ರಶ್ನಿಸಿದರು.

“ಅಗತ್ಯ ವಸ್ತುಗಳ ಬೆಲೆ ಏರಿಕೆ, ದಿನನಿತ್ಯದ ಖರ್ಚು ಹಾಗೂ ಆರ್ಥಿಕ ಒತ್ತಡದಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತತ್ತರಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆ ಎಂಬ ಕಾರಣಕ್ಕೆ ಜನರ ಬದುಕಿನ ಇತರ ಸಮಸ್ಯೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಜನರಿಗೆ ನೀಡುವ ಸೌಲಭ್ಯಗಳ ಜೊತೆಗೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೂ ಸರ್ಕಾರ ಸಮಾನ ಆದ್ಯತೆ ನೀಡಬೇಕು. ಗ್ಯಾರಂಟಿಗಳ ಪ್ರಚಾರಕ್ಕೆ ಸೀಮಿತವಾಗದೆ, ಬೆಲೆ ಏರಿಕೆಯನ್ನು ನಿಯಂತ್ರಿಸಿ ಜನಸಾಮಾನ್ಯರ ಬದುಕಿಗೆ ನೆಮ್ಮದಿ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಅಕ್ಬರ್ ಅಲಿ ಪೊನ್ನೋಡಿ ಹೇಳಿದರು.

ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್. ಮಾತನಾಡಿ, “ಜನರು ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದಾಗ ಬೇರೆ ರಾಜ್ಯಗಳ ಬೆಲೆ ಏರಿಕೆಯನ್ನು ಉದಾಹರಣೆಯಾಗಿ ತೋರಿಸುವುದಾದರೆ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಿರುವುದಾದರೂ ಏಕೆ? ಜನರು ಮತ ಹಾಕಿ ಅಧಿಕಾರಕ್ಕೆ ತಂದಿರುವುದು ಕರ್ನಾಟಕದ ಜನರ ಕಷ್ಟಗಳನ್ನು ನಿವಾರಿಸಲು ಹೊರತು ಬೇರೆ ರಾಜ್ಯಗಳ ಬೆಲೆ ಏರಿಕೆಯನ್ನು ನಮ್ಮ ರಾಜ್ಯದಲ್ಲಿ ಪ್ರಯೋಗಿಸಲು ಅಲ್ಲ” ಎಂದು ಟೀಕಿಸಿದರು.

ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಅಡ್ವಕೇಟ್ ಕಬೀರ್ ಕೆಮ್ಮಾರ ಮಾತನಾಡಿ, “ಜನಸಾಮಾನ್ಯರ ದಿನನಿತ್ಯದ ಜೀವನ ವೆಚ್ಚ ದುಪ್ಪಟ್ಟಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಜಾಗದ ನೋಂದಣಿ ಹಾಗೂ ಮುದ್ರಾಂಕ ಶುಲ್ಕಗಳೂ ಹೆಚ್ಚಳವಾಗಿವೆ. ಹಿಂದೆ ಇದ್ದ ಸ್ಟ್ಯಾಂಪ್ ಪೇಪರ್ ವೆಚ್ಚಕ್ಕೆ ಹೋಲಿಸಿದರೆ ಈಗ ಮೂರು ಪಟ್ಟು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳನ್ನು ತೋರಿಸಿ ಮತ ಪಡೆದು, ಅದೇ ಮತದಾರರ ಮೇಲೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆ ಹೇರುತ್ತಿರುವುದು ಖಂಡನೀಯ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಕಬೀರ್ ಅಕ್ಕರಂಗಡಿ, ಯೂಸುಫ್ ಆಲಡ್ಕ, ಅಝೀಝ್ ಕಡಂಬು, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು ಉಪಸ್ಥಿತರಿದ್ದರು. ಬಿ.ಸಿ.ರೋಡ್ ಸಿಟಿ ಕೌನ್ಸಿಲ್ ಅಧ್ಯಕ್ಷ ಅನ್ವರ್ ಕೆ.ಎಚ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!