ವಾಷಿಂಗ್ಟನ್: ಭಾರತ–ಪಾಕಿಸ್ತಾನ ನಡುವಿನ ಸಂಘರ್ಷವನ್ನು ತಾನೇ ನಿಲ್ಲಿಸಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಚರಿಸಿದ್ದಾರೆ.
ಶ್ವೇತಭವನದಲ್ಲಿ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ಸಂಘರ್ಷ ಮುಂದುವರಿದಿದ್ದರೆ ಭಾರತ ಮತ್ತು ಪಾಕಿಸ್ತಾನದ ಮೇಲೆ ಶೇ.200ರಿಂದ 250ರವರೆಗೆ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾಗಿ ಹೇಳಿದ್ದಾರೆ. ತಮ್ಮ ಈ ನಿಲುವಿನ ಪರಿಣಾಮವೇ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ತಿಳಿಸಿದ್ದಾರೆ.
“ನನ್ನ ಮಧ್ಯಸ್ಥಿಕೆಯಿಂದ ಸುಮಾರು 3ರಿಂದ 5 ಕೋಟಿ ಜನರ ಪ್ರಾಣ ಉಳಿದಿವೆ. ಸಂಭವನೀಯ ಅಣ್ವಸ್ತ್ರ ಯುದ್ಧವೂ ತಪ್ಪಿದೆ,” ಎಂದು ಟ್ರಂಪ್ ಹೇಳಿದ್ದಾರೆ. ತಮ್ಮ ಕ್ರಮಕ್ಕೆ ಸಂಬಂಧಿಸಿ ಹಲವು ಧನ್ಯವಾದ ಪತ್ರಗಳು ಹಾಗೂ ನೋಬೆಲ್ ಸಮಿತಿಗೆ ಶಿಫಾರಸುಗಳು ಬಂದಿವೆ ಎಂದೂ ತಿಳಿಸಿದ್ದಾರೆ.
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಸಮೀಪದ ಬೈಸರನ್ ಕಣಿವೆಯಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದು 2008ರ ಮುಂಬೈ ದಾಳಿಯ ಬಳಿಕ ನಾಗರಿಕರ ಮೇಲೆ ನಡೆದ ಅತಿದೊಡ್ಡ ದಾಳಿಯಾಗಿದೆ.
ಈ ದಾಳಿಯ ಹೊಣೆಗಾರಿಕೆಯನ್ನು ‘ದಿ ರೆಸಿಸ್ಟೆನ್ಸ್ ಫ್ರಂಟ್’ ಹೊತ್ತಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವು.
ಈ ವೇಳೆ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನಂತರ ಪಾಕಿಸ್ತಾನದ ಡಿಜಿಎಂಒ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿ ಕದನ ವಿರಾಮಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಮೇ 10, 2025ರ ಸಂಜೆ 5 ಗಂಟೆಯಿಂದ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಜಾರಿಗೆ ಬಂದಿತ್ತು.
ಆದರೆ, ಈ ಕದನ ವಿರಾಮಕ್ಕೆ ತಾವೇ ಕಾರಣ ಎಂದು ಟ್ರಂಪ್ ಮಾಡುತ್ತಿರುವ ಹೇಳಿಕೆಯನ್ನು ಭಾರತ ಸರ್ಕಾರ ನಿರಾಕರಿಸಿದೆ. ಟ್ರಂಪ್ ಅವರ ಪುನರುಚ್ಚರಿತ ಹೇಳಿಕೆ ಇದೀಗ ರಾಜಕೀಯ ಹಾಗೂ ರಾಜತಾಂತ್ರಿಕ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.