ಬಲೂಚಿಸ್ಥಾನ (ಪಾಕಿಸ್ತಾನ), ಜು.31: ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದ ಕ್ವೆಟ್ಟಾ ಹೊರವಲಯದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟದಲ್ಲಿ ಕನಿಷ್ಠ 32 ಗಣಿಗಾರರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಹಲವು ಕಾರ್ಮಿಕರು ಗಣಿಯೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಜುಲೈ 30ರಂದು ಸಂಭವಿಸಿದ ಈ ದುರಂತಕ್ಕೆ ಗಣಿಯೊಳಗೆ ಅಪಾಯಕಾರಿಯಾಗಿ ಸಂಗ್ರಹವಾಗಿದ್ದ ಮೀಥೇನ್ ಅನಿಲ ಸ್ಫೋಟಗೊಂಡಿರುವುದೇ ಕಾರಣ ಎಂದು ಅಧಿಕಾರಿಗಳು ಪ್ರಾಥಮಿಕವಾಗಿ ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಸುಮಾರು 4,500 ಅಡಿ ಆಳದ ಗಣಿ ಸುರಂಗಗಳು ಕುಸಿದುಬಿದ್ದಿವೆ, ಇದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ.

ಆರಂಭಿಕ ವರದಿಗಳಲ್ಲಿ 18 ಮಂದಿ ಮೃತಪಟ್ಟಿದ್ದು, 24 ಮಂದಿ ಗಣಿಯೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿತ್ತು. ಆದರೆ ಅವಶೇಷಗಳ ತೆರವು ಕಾರ್ಯ ಮುಂದುವರಿದಂತೆ ಮೃತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
ರಕ್ಷಣಾ ತಂಡಗಳು ಇನ್ನೂ ಸುಮಾರು 10 ಮಂದಿ ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲು ಪ್ರಯತ್ನಿಸುತ್ತಿದ್ದು, ಗಣಿಯೊಳಗೆ ಆಮ್ಲಜನಕವನ್ನು ಪಂಪ್ ಮಾಡಲಾಗುತ್ತಿದೆ. ವಿಷಕಾರಿ ಅನಿಲದ ಪ್ರಮಾಣ ಹಾಗೂ ಕುಸಿದಿರುವ ಕಲ್ಲಿನ ರಾಶಿಯಿಂದ ಕಾರ್ಯಾಚರಣೆ ಸವಾಲಿನದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ಪಾಕಿಸ್ತಾನಿ ರೂಪಾಯಿ ಪರಿಹಾರ ಘೋಷಿಸಿರುವ ಬಲೂಚಿಸ್ಥಾನ ಸರ್ಕಾರ, ಸ್ಫೋಟದ ನಿಖರ ಕಾರಣ ಹಾಗೂ ಗಣಿಯಲ್ಲಿ ಸುರಕ್ಷತಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿತ್ತೇ ಎಂಬ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.


