ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಬಳಿಕ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿಚಾರಕ್ಕೆ ರಾಜಕೀಯ ವಾಗ್ವಾದ ತೀವ್ರಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಆರ್ಥಿಕತೆಯನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

ವಿಧಾನಸಭಾ ಚುನಾವಣೆಗಳು ಮುಗಿದ ತಕ್ಷಣವೇ ಬೆಲೆ ಏರಿಕೆ ಮಾಡಲಾಗಿದೆ. ಮೇ 1ರಿಂದ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು ₹993 ಹೆಚ್ಚಳಗೊಂಡು, ಒಟ್ಟು ₹3,071ಕ್ಕೆ ತಲುಪಿದೆ ಎಂದು ಅವರು ಹೇಳಿದರು. ಕೇವಲ ನಾಲ್ಕು ತಿಂಗಳಲ್ಲಿ ಆರು ಬಾರಿ ಬೆಲೆ ಏರಿಕೆ ಮಾಡಿದ್ದು, ಒಟ್ಟು ₹1,518ರಷ್ಟು ಹೊರೆ ಜನರ ಮೇಲೆ ಹಾಕಲಾಗಿದೆ ಎಂದು ಟೀಕಿಸಿದರು.

ಇದು ಆಡಳಿತವಲ್ಲ, ಸಂಘಟಿತ ಲೂಟಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಈ ಹೆಚ್ಚಳವು ಕೇವಲ ವ್ಯಾಪಾರಿಗಳಿಗೆ ಮಾತ್ರವಲ್ಲ, ಸಾಮಾನ್ಯ ಜನರ ಮೇಲೂ ಪರಿಣಾಮ ಬೀರುತ್ತದೆ. ಒಂದು ಕಪ್ ಚಹಾದಿಂದ ಹಿಡಿದು ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತದೆ ಎಂದು ಹೇಳಿದರು. ಕಾರ್ಮಿಕ ದಿನದಂದು ಈ ಬೆಲೆ ಏರಿಕೆ ಕಾರ್ಮಿಕ ವರ್ಗಕ್ಕೆ ‘ಉಡುಗೊರೆ’ ಎಂದು ವ್ಯಂಗ್ಯವಾಡಿದರು.

ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯ ಹೊರೆ ಅಂತಿಮವಾಗಿ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಸಣ್ಣ ವ್ಯಾಪಾರಿಗಳು, ಹೊಟೇಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸಬೇಕಾದ ಸಮಯದಲ್ಲಿ ಕೇಂದ್ರದ ನೀತಿಗಳು ವಿಫಲವಾಗುತ್ತಿವೆ ಎಂದು ಆರೋಪಿಸಿದ ಅವರು, ಈ ಬೆಲೆ ಏರಿಕೆ ಬಡವರಿಗೆ ದ್ರೋಹವಾಗಿದೆ ಎಂದು ಟೀಕಿಸಿದರು. ಜನರ ಮೇಲಿನ ಹೊರೆ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು ಒಂದೂವರೆ ಕೋಟಿ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!