ಸಂಘಟನಾ ಶಕ್ತಿ ಮತ್ತು ಪರಂಪರೆಯ ಆತಿಥ್ಯ: ಒಂದು ಅಂತಃಕರಣದ ಅವಲೋಕನ

ಸಂಘಟನೆಯೆನ್ನುವುದು ಬರೀ ವ್ಯಕ್ತಿಗಳ ಸಮೂಹವಲ್ಲ; ಅದೊಂದು ಉದಾತ್ತ ಭಾವನೆಗಳ ಸುಂದರ ಸಂಗಮ. ‘ಸಮಿತಿ’ ಎನ್ನುವುದು ಕೇವಲ ಕಾಗದದ ಮೇಲೆ ಗೀಚಿದ ಹೆಸರುಗಳ ಪಟ್ಟಿಯಲ್ಲ, ಅದು ಹತ್ತಾರು ಭಿನ್ನ ಮನಸ್ಸುಗಳು ಒಂದು ಸದಾಶಯದ ಗುರಿಯೆಡೆಗೆ ನಡೆಸುವ ಸಮಾನಾಂತರ ಪಯಣ. ಒಂದು ಸುಂದರ ಕಾರ್ಯಕ್ರಮವು ಸುಲಲಿತವಾಗಿ ಅರಳಬೇಕಾದರೆ, ಅಲ್ಲಿ ವೈಯಕ್ತಿಕ ಪ್ರತಿಷ್ಠೆಯ ಕಾರ್ಮೋಡಗಳಿಗಿಂತ ‘ಸಮಷ್ಠಿ ಪ್ರಜ್ಞೆ’ಯ ಬೆಳಕು ಪ್ರಖರವಾಗಬೇಕು.

ಸಮನ್ವಯದ ಸೂತ್ರ ಮತ್ತು ಉಪಸಮಿತಿಗಳ ಪಾತ್ರ


​ಸಮಿತಿಯೊಳಗಿನ ಪರಸ್ಪರತೆ ಹಾಲಿನಲ್ಲಿ ಜೇನು ಬೆರೆತಂತೆ ಇರಬೇಕು; ಎಲ್ಲಿಯೂ ವ್ಯತ್ಯಾಸ ಕಾಣದಂತೆ ಸವಿಯಷ್ಟೇ ಉಳಿಯಬೇಕು. ಒಬ್ಬರ ಕಲ್ಪನೆಗೆ ಮತ್ತೊಬ್ಬರ ಕ್ರಿಯಾಶೀಲ ಬೆಂಬಲ ಸಿಕ್ಕಾಗ ಮಾತ್ರ ಯೋಜನೆಯೊಂದು ಯಶಸ್ಸಿನ ಸಿಂಹಾಸನವನ್ನೇರುತ್ತದೆ. ಯಾವುದೇ ಕಾರ್ಯಕ್ರಮದ ವ್ಯವಸ್ಥೆ ಮತ್ತು ಉಸ್ತುವಾರಿ ಎನ್ನುವುದು ಒಂದು ಚಕ್ರವ್ಯೂಹವಿದ್ದಂತೆ. ಅದನ್ನು ಯಶಸ್ವಿಯಾಗಿ ಭೇದಿಸಲು ಸಮರ್ಥವಾದ ಉಪಸಮಿತಿಗಳು ಸಂಘಟನೆಯ ಪ್ರಾಣವಾಯುವಿನಂತೆ ಕೆಲಸ ಮಾಡಬೇಕು. ಸ್ವಾಗತ, ಆಹಾರ, ವೇದಿಕೆ, ಪ್ರಚಾರ ಹೀಗೆ ಪ್ರತಿಯೊಂದು ವಿಭಾಗವೂ ತನ್ನದೇ ಆದ ಜವಾಬ್ದಾರಿಯುತ ಅಸ್ತಿತ್ವ ಹೊಂದಿರಬೇಕು. ಅಡುಗೆ ಮನೆಯ ಉಸ್ತುವಾರಿ ನೋಡುವ ತಂಡವು, ಬಡಿಸುವವನ ಮುಗುಳ್ನಗೆಯ ವರೆಗೆ ಕಾಳಜಿ ವಹಿಸಿದಾಗ ಮಾತ್ರ ಕಾರ್ಯಕ್ರಮದ ಪೂರ್ಣ ಜಯ ದಕ್ಕಲು ಸಾಧ್ಯ.


​ಸಮಿತಿಯೊಳಗಿನ ಸಂವಹನ ತಿಳಿ ನೀರಿನಂತೆ ಪಾರದರ್ಶಕವಾಗಿರಲಿ; ಅಲ್ಲಿ ಅಹಂಕಾರದ ಕಸಕಡ್ಡಿಗಳಿಗೆ ಜಾಗವಿರಬಾರದು. ಒಬ್ಬ ಅಧ್ಯಕ್ಷನ ಜವಾಬ್ದಾರಿ ಕೇವಲ ಅಪ್ಪಣೆ ಮಾಡುವುದಲ್ಲ, ಬದಲಾಗಿ ಎಲ್ಲರನ್ನೂ ಪ್ರೀತಿಯಿಂದ ಸಂಕಲ್ಪದ ಸೂತ್ರದಲ್ಲಿ ಪೋಣಿಸುವ ಸೂತ್ರಧಾರನಾಗಿರುವುದು. ತಂಡದ ಕೊನೆಯ ಸದಸ್ಯನ ಸಣ್ಣ ಸಲಹೆಯನ್ನೂ ಗೌರವದಿಂದ ಆಲಿಸಿದಾಗ ಆ ಸಮಿತಿಯ ಘನತೆ ಆಕಾಶದೆತ್ತರಕ್ಕೆ ಬೆಳೆಯುತ್ತದೆ. ಅಜೆಂಡಾ ಎನ್ನುವುದು ಕಾರ್ಯಕ್ರಮದ ಭೂಪಟವಿದ್ದಂತೆ; ಅಲ್ಲಿ ಸಮಯ ಪ್ರಜ್ಞೆ ಮತ್ತು ಸ್ಪಷ್ಟತೆ ಇದ್ದರೆ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ.

ಆತಿಥ್ಯದ ಅಂತಃಕರಣ: ಗುತ್ತಿನ ಪರಂಪರೆ


​ಈ ಎಲ್ಲ ತಾಂತ್ರಿಕ ಚೌಕಟ್ಟುಗಳಿಗಿಂತ ಮಿಗಿಲಾದದ್ದು ಅಂತಃಕರಣದ ಆತಿಥ್ಯ. “ಅತಿಥಿ ದೇವೋ ಭವ” ಎನ್ನುವುದು ನಮ್ಮ ಮಣ್ಣಿನ ಸಂಸ್ಕಾರದ ಬೇರು. ಬಂದ ಅತಿಥಿ ಕಾರ್ಯಕ್ರಮ ಮುಗಿಸಿ ಬರಿಗೈಲಿ ಬಂದು ಬರಿಗೈಲಿ ಹೋದರೆ ಅಲ್ಲಿ ಸಂಘಟನೆಯ ಆಶಯ ಸೋತಂತೆ. ಅದರಲ್ಲೂ ‘ಗುತ್ತು’ ಮನೆತನದಂತಹ ಭವ್ಯ ಪರಂಪರೆಯ ಹಿನ್ನೆಲೆಯಿರುವಾಗ, ಪ್ರತಿಯೊಬ್ಬ ಅತಿಥಿಯೂ ತಾನು ಈ ಮನೆಯವನೇ ಎಂದು ಭಾವಿಸುವಂತೆ ಉಪಚರಿಸುವುದು ಆ ಮನೆತನದ ಅಸ್ಮಿತೆಯ ಪ್ರಶ್ನೆಯಾಗುತ್ತದೆ. ಬಂದವನಿಗೆ ಬಾಯಾರಿಕೆಗೆ ನೀರು ಕೊಡುವಾಗಲೂ ಅಲ್ಲಿ ಯಜಮಾನಿಕೆಯ ದರ್ಪವಿರಬಾರದು, ಬದಲಾಗಿ ಆತ್ಮೀಯತೆಯ ಒರತೆ ಇರಬೇಕು. ಸ್ಮಿತವದನದಿಂದ ಬರಮಾಡಿಕೊಳ್ಳುವುದು, ಕಣ್ಣಿನ ನೋಟದಲ್ಲೇ ಕುಶಲೋಪರಿ ವಿಚಾರಿಸುವುದು ಮತ್ತು ಅಷ್ಟೇ ಗೌರವದಿಂದ ಬೀಳ್ಕೊಡುವುದು ಗುತ್ತು ಮನೆತನದ ಗಾಂಭೀರ್ಯವನ್ನು ಎತ್ತಿ ಹಿಡಿಯುತ್ತದೆ.

ಆತಿಥೇಯನ ನೈತಿಕ ಹೊಣೆಗಾರಿಕೆ


​ಒಬ್ಬ ಆದರ್ಶ ಆತಿಥೇಯನಾದವನು ಕೇವಲ ವೇದಿಕೆಯ ಮೇಲೆ ಮಿಂಚುವವನಲ್ಲ; ಆತ ಅತಿಥಿಗಳ ಮನಸ್ಸನ್ನು ಗೆಲ್ಲುವವನಾಗಿರಬೇಕು.
​ಅತಿಥಿ ಮನೆಗೆ ಅಥವಾ ಸಭೆಗೆ ಬಂದಾಗ ಎದ್ದು ನಿಂತು ಸ್ವಾಗತಿಸುವ ವಿನಯವಿದೆಯಲ್ಲ, ಅದು ನಿಮ್ಮ ವ್ಯಕ್ತಿತ್ವದ ದೊಡ್ಡತನ.
​ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಗಮನ ನೀಡಲಾಗದಿದ್ದರೂ, ನಿಮ್ಮ ಕಣ್ಣೋಟದಲ್ಲಿ ಎಲ್ಲರನ್ನೂ ಆವರಿಸಿಕೊಳ್ಳುವ ಪ್ರೀತಿ ಇರಲಿ.
​ಅತಿಥಿಗಳ ಅಗತ್ಯಗಳನ್ನು ಅವರು ಕೇಳುವ ಮೊದಲೇ ಗ್ರಹಿಸಿ ಪೂರೈಸುವ ಜಾಣ್ಮೆ ಆತಿಥೇಯನ ಗುಣವಾಗಿರಲಿ.

ಯಜಮಾನಿಕೆಯ ನಿಜವಾದ ಅರ್ಥ


​ಇಡೀ ವ್ಯವಸ್ಥೆಯಲ್ಲಿ ಮನೆಯ ಯಜಮಾನನ ಪಾತ್ರ ಅತ್ಯಂತ ನಿರ್ಣಾಯಕ. ಯಜಮಾನನೇ ತನ್ನವರಲ್ಲಿ ಮೇಲು-ಕೀಳು ಎಂಬ ತಾರತಮ್ಯ ಮಾಡಿದರೆ ಅಥವಾ ಜವಾಬ್ದಾರಿಯಿಂದ ನುಣುಚಿಕೊಂಡು ಮೌನಕ್ಕೆ ಶರಣಾದರೆ, ಇಡೀ ವ್ಯವಸ್ಥೆಯ ಹಡಗು ದಾರಿ ತಪ್ಪುತ್ತದೆ. ಮನೆಯ ಯಜಮಾನ ಎಂದರೆ ಸಮಸ್ತವನ್ನೂ ತನ್ನ ಬೆನ್ನ ಮೇಲೆ ಹೊತ್ತು ನಿಲ್ಲುವ ಶಕ್ತಿ ಕೇಂದ್ರ. ಆತ ತನ್ನ ಕುಟುಂಬದವರನ್ನು ಮತ್ತು ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ, ಬಂದವ ‘ಬಂದ ಹೋದವ ಹೋದ’ ಎಂಬ ಉದಾಸೀನದ ಮಾತು ಕೇಳಿಬರುತ್ತದೆ. ಆಗ ತಲೆತಲಾಂತರದ ಪರಂಪರೆ ಮತ್ತು ಯಜಮಾನಿಕೆಯ ಗೌರವಕ್ಕೆ ಕುಂದುಂಟಾಗುತ್ತದೆ.
​ಯಜಮಾನಿಕೆಯ ಗೌರವ ಉಳಿಯುವುದು ಆದೇಶಗಳ ಸುರಿಮಳೆಯಿಂದಲ್ಲ; ಬದಲಾಗಿ ಎಲ್ಲರನ್ನೂ ಸಮಾನವಾಗಿ ಕಂಡು, ಕೆಲಸದ ಹೊಣೆಯನ್ನು ಪ್ರೀತಿಯಿಂದ ಹಂಚಿ, ತಾನೇ ಒಬ್ಬ ಸಾಮಾನ್ಯನಂತೆ ಮುಂಚೂಣಿಯಲ್ಲಿ ನಿಂತು ಶ್ರಮಿಸಿದಾಗ ಮಾತ್ರ. ಕೆಲಸ ಮಾಡುವವರ ನಡುವೆ ತಾನೂ ಒಬ್ಬನಾಗಿ ಬೆರೆತು, ಎಲ್ಲರ ಶ್ರಮವನ್ನು ಗುರುತಿಸಿ ಬೆನ್ನುತಟ್ಟುವವನೇ ನಿಜವಾದ ಯಜಮಾನ. ಸಂಘಟನೆಯಲ್ಲಿ ಪ್ರೀತಿಯ ಕಂಪಿರಲಿ, ವ್ಯವಸ್ಥೆಯಲ್ಲಿ ಶಿಸ್ತಿನ ಲಯವಿರಲಿ, ಆತಿಥ್ಯದಲ್ಲಿ ಅಕ್ಷಯ ಪಾತ್ರೆಯಂತಹ ಅಂತಃಕರಣವಿರಲಿ – ಆಗ ಮಾತ್ರ ಯಾವುದೇ ಕಾರ್ಯಕ್ರಮವು ಒಂದು ಸುಂದರ ಕಾವ್ಯದಂತೆ ಕಾಲದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ.
​ಸದಾಶಯದ ಚಿಂತನೆಯೊಂದಿಗೆ.
ನಮಸ್ಕಾರ 🙏

✍️ ಬರಹ: ದಯಾನಂದ ರೈ ಕಳ್ವಾಜೆ

SHARE
Loading spinner

Leave a Reply

Your email address will not be published. Required fields are marked *

error: Content is protected !!