ಮಂಗಳೂರಿನ ಬಂದರಿನ ಜೈನ ಬಸದಿ

ತುಳುನಾಡು ಬಹು ಭಾಷೆಗಳ ಗೂಡು , ವಿವಿಧ ಧರ್ಮಗಳನ್ನು ಪೊರೆಯುವ ತೊಟ್ಟಿಲು , ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳು ವೈಶಿಷ್ಟಗಳಿಂದ ಕೂಡಿದೆ . ಕಲೆಯನ್ನು ಆರಾಧಿಸುವ ಪರಂಪರೆ , ವೈಧಿಕ ವಿಚಾರಗಳನ್ನು ಪರಸ್ಪರ ಗೌರವಿಸುವ ನಡೆ , ದೇವಾಲಯಗಳಲ್ಲಿ ಶ್ರೀಮಂತವಾಗಿರುವ ವಾಸ್ತು ಶೈಲಿ ಎಲ್ಲವೂ ಈ ಮಣ್ಣಿನ ಅಸ್ಮಿತೆಗೆ ಹಿಡಿದ ಕೈ ಗನ್ನಡಿಯಾಗಿದೆ . ಇತಿಹಾಸವನ್ನು ತನ್ನ ಒಡಲಲ್ಲಿ ಇಟ್ಟು ವಾಸ್ತು ಶಿಲ್ಪ ಶೈಲಿಯಿಂದ ಕಣ್ಮನವವನ್ನು ಸೆಳೆಯುವ ಬಸದಿ ಮಂಗಳೂರಿನ ಬಜಿಲಕೇರಿಯಲ್ಲಿದ್ದು ಇದನ್ನು ಶ್ರೀ ಆದೀಶ್ವರ ಸ್ವಾಮಿ ಜೈನ ಬಸದಿ ಎಂಬುದಾಗಿ ಕರೆಯುತ್ತಾರೆ

ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಬಸ್ತಿಹಿತ್ಲು ಪ್ರದೇಶದಲ್ಲಿರುವ ಈ ಬಸದಿ ಪುರಾತನ ಜೈನ ಧಾರ್ಮಿಕ ಕೇಂದ್ರದ ಆರಾಧನಾ ಆಲಯವಾಗಿದೆ . ಇದರ ಇತಿಹಾಸದ ಬೇರುಗಳು ಬಹಳ ಆಳಕ್ಕೆ ಹೋಗಿದ್ದರೂ ಸಹ ಲಭ್ಯ ದಾಖಲೆಗಳು ಹೇರಳವಾಗಿ ಇಲ್ಲಿ ಕಾಣಸಿಗುವುದಿಲ್ಲ . ಹಾಗಾಗಿ ಬಸದಿಯ ಮುಂಭಾಗದ ಬಲ ಭಾಗದ ಗೋಡೆಯ ಮೇಲಿರುವ ತಾಮ್ರಪಟ ಶಾಸನವು ಇತಿಹಾಸದ ಮೇಲೆ ಬೆಳಕು ಚೆಲ್ಲಲ್ಲು ಸಹಕಾರಿಯಾಗಿದೆ . ಇದರ ಜೊತೆಗೆ ಹಿರಿಯರಿಂದ ಕೇಳಿಬಂದ ಮಾಹಿತಿಯ ಆಧಾರದಲ್ಲಿ ಇಲ್ಲಿನ ಇತಿಹಾಸ ಕಥನವನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ ಮಾಡುತ್ತೇನೆ.

ಬಸದಿಯಲ್ಲಿರುವ ತಾಮ್ರಶಾಸನದ ಪ್ರಕಾರ

ಸುಮಾರು 1933ರ ಕಾಲಘಟ್ಟಕ್ಕೆ ಸೇರಿದ ಈ ತಾಮ್ರಶಾಸನದಲ್ಲಿ ಈ ರೀತಿಯ ಉಲ್ಲೇಖಗಳನ್ನು ನಾವು ನೋಡುತ್ತೇವೆ, ಸರಳ ಕನ್ನಡ ಭಾಷೆಯಲ್ಲಿ ಇರುವ ಈ ಶಾಸನವು ಬಸದಿ ನಿರ್ಮಾಣ ಹಾಗೂ ಧಾರ್ಮಿಕ ದಾನಗಳ ಬಗ್ಗೆ ಉಲ್ಲೇಖಗಳನ್ನು ಒಳಗೊಂಡ ಕಾರಣ ಇದೊಂದು ಧಾನ ಶಾಸನವಾಗಿದೆ.

ಶಾಸನದ ಪ್ರಕಾರ, ಆದಿನಾಥ, ಶಾಂತಿನಾಥ ಹಾಗೂ ಮಲ್ಲಿನಾಥ ತೀರ್ಥಂಕರರಿಗೆ ಸಮರ್ಪಿತವಾಗಿರುವ ಈ ಬಸದಿ, ಬಲ್ಲಾಳ ಕುಟುಂಬದವರಿಂದ ಭಕ್ತಿಭಾವದಿಂದ ನಿರ್ಮಾಣ ಅಥವಾ ಪುನರ್‌ನಿರ್ಮಾಣಗೊಂಡಿರುವುದಾಗಿ ಇದೆ .ಇದಲ್ಲದೆ, ಧರ್ಮಾರ್ಥ ಕಾರ್ಯಗಳಿಗಾಗಿ ಆಸ್ತಿಯನ್ನು ದಾನವಾಗಿ ನೀಡಿರುವ ಬಗ್ಗೆ ಮಾಹಿತಿಯೂ ಶಾಸನದಲ್ಲಿ ದಾಖಲಿಸಲಾಗಿದೆ. ಜೈನ ಧರ್ಮದ ಸೇವೆ ಮತ್ತು ಪರಂಪರೆಯನ್ನು ಉಳಿಸಲು ಈ ದಾನ ಮಹತ್ವದ್ದಾಗಿದೆ ಎಂಬುದನ್ನು ಶಾಸನ ಸ್ಪಷ್ಟಪಡಿಸುತ್ತದೆ.ಇದರ ಪ್ರಕಾರ ಆ ಕಾಲದಲ್ಲಿ ಜೈನ ಸಮುದಾಯದ ಧಾರ್ಮಿಕ ಚಟುವಟಿಕೆಗಳು ಮತ್ತು ದಾನಧರ್ಮಗಳು ಸಕ್ರಿಯವಾಗಿದ್ದವು ಎಂಬುದು ಗೊತ್ತಾಗುತ್ತದೆ. ಒಟ್ಟಿನಲ್ಲಿ, ಈ ತಾಮ್ರಶಾಸನವು ಮಂಗಳೂರಿನ ಜೈನ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕನ್ನು ಚೆಲ್ಲುತ್ತದೆ.

ತಾಮ್ರ ಶಾಸನದ ಪಠ್ಯ …..!

ಈ ಸ್ವತಂತ್ರ್ಯ ಪೂರ್ವ ಶಾಸನದಲ್ಲಿ ಜೈನ ಧರ್ಮದ ಚೈತ್ಯಾಲಯದ ಜೀರ್ಣೋದ್ಧಾರ ಹಾಗೂ ಪುನರ್ಪ್ರತಿಷ್ಠೆಯ ಇತಿಹಾಸವನ್ನು ಬೆಳಕಿಗೆ ತಂದಿದೆ.

ಶಾಸನದ ಪ್ರಕಾರ, ಶಾಲಿವಾಹನ ಶಕ 1854 (ಕ್ರಿ.ಶ. 1932 – 33 ರ ಸುಮಾರಿಗೆ), ಅಂಗೀರಸ ಸಂವತ್ಸರದ ಕುಂಭ ಮಾಸದ ಪಾಲ್ಗುಣ ಶುಕ್ರ ಪಂಚಮಿ ಬುಧವಾರದಂದು, ಸೂರ್ಯೋದಯದ ಸಮಯದಲ್ಲಿ ಮೀನಾ ಲಗ್ನದಲ್ಲಿ ಈ ಮಹತ್ವದ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು. ಈ ಚೈತ್ಯಾಲಯದಲ್ಲಿ ಶ್ರೀ ಆದೀಶ್ವರ, ಶ್ರೀ ಶಾಂತಿಶ್ವರ ಮತ್ತು ಶ್ರೀ ಪಾಶ್ವನಾಥ ತೀರ್ಥಂಕರರ ಪ್ರಾಚೀನ ದೇವಾಲಯವನ್ನು ಶ್ರೀಯುತ ಕಟ್ಟೆಮಾರು ರಘು ಚಂದ್ರ ಬಲ್ಲಾಳ ಮಹಾಶಯರು ಸುಮಾರು 50 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿಸಿದರು.
ಜೀರ್ಣೋದ್ಧಾರದ ಬಳಿಕ ಪಂಚಕಲ್ಯಾಣ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿ, ದೇವರ ಬಿಂಬಗಳನ್ನು ಪುನಃ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.ಈ ಶಾಸನವು ಆ ಕಾಲದ ಧಾರ್ಮಿಕ ಭಕ್ತಿ, ದಾನಶೀಲತೆ ಮತ್ತು ಜೈನ ಸಂಸ್ಕೃತಿಯ ಮಹತ್ವವನ್ನು ಸಾರುತ್ತದೆ .

ಬಸದಿಯ ಆಡಳಿತ ಮೊಕೇಸ್ತರಾದ ಶೋಭಕ್ಕರ್ ಬಳ್ಳಾಲ್ ಹೇಳಿದ ಬಸದಿಯ ಇತಿಹಾಸ….!

ಬಸದಿಗೆ ಸಮಂಧಿಸಿ ತಾಮ್ರ ಶಾಸನ ಬಿಟ್ಟು ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಪರಂಪರಾಗತವಾಗಿ ಬಂದಿರುವ ಕಥೆಗಳು ಇತಿಹಾಸವನ್ನು ಕಟ್ಟಲು ಸಹಕಾರಿಯಾಗಿದೆ ಎಂದು ಬಸದಿಯ ಆಡಳಿತ ಮೊಕೇಸ್ತರಾದ ಶೋಭಕ್ಕರ್ ಬಳ್ಳಾಲ್ ಹೇಳಿದ್ದಾರೆ .

ಅವರು ದೇವಾಲಯದ ಇತಿಹಾಸದ ಬಗ್ಗೆ ಮಾತನಾಡುತ್ತಾ , ಈ ಬಸದಿ ಮೂಲತಃ “ಲಕ್ಷ್ಮಪ್ಪ ಬಂಗಾರಸು” ಎಂಬ ಸ್ಥಳೀಯ ಅರಸರಿಂದ ನಿರ್ಮಿಸಲ್ಪಟ್ಟಿದೆ ಎಂಬ ಮಾತು ಪ್ರಚಲಿತದಲ್ಲಿದೆ. ಆ ಕಾಲದಲ್ಲಿ ಬಂದರು ಪ್ರದೇಶವು ಜೈನ ಸಮುದಾಯದ ಪ್ರಮುಖ ವಾಸಸ್ಥಳವಾಗಿದ್ದು, ಇಲ್ಲಿ ಅನೇಕ ಜೈನ ಕುಟುಂಬಗಳು ನೆಲೆಸಿದ್ದವು. ವ್ಯಾಪಾರದಲ್ಲಿ ತೊಡಗಿದ್ದ ಈ ಸಮುದಾಯವು ದೊಡ್ಡ ಹಡಗುಗಳ ಮೂಲಕ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದರು ಎಂಬುದೂ ಸತ್ಯ .

ಕಾಲಕ್ರಮೇಣ, ಟಿಪ್ಪು ಸುಲ್ತಾನರ ಆಡಳಿತದ ಅವಧಿಯಲ್ಲಿ ಧಾರ್ಮಿಕ ಪರಿವರ್ತನೆಗಳು ನಡೆದ ಕಾರಣ, ಇಲ್ಲಿ ವಾಸಿಸುತ್ತಿದ್ದ ಜೈನರ ಸಂಖ್ಯೆ ಕಡಿಮೆಯಾಯಿತು ಎಂಬ ಮಾತುಗಳಿವೆ. ಇಂದಿಗೂ ಕೆಲವು ಮನೆಗಳಲ್ಲಿ ಜೈನ ಸಂಪ್ರದಾಯದ ಗುರುತುಗಳು ಕಾಣಿಸಿಕೊಳ್ಳುತ್ತವೆ.

ಆರಂಭದಲ್ಲಿ ಈ ಬಸದಿ ಸರಳವಾಗಿ, ಮುಳಿ ಹುಲ್ಲಿನಿಂದ ನಿರ್ಮಿತವಾಗಿತ್ತು. ನಂತರ 1935ರಲ್ಲಿ ಕಟ್ಟೆಮಾರು ರಘುಚಂದ್ರ ಬಳ್ಳಾಲ್ ಅವರು ಇದನ್ನು ಸಂಪೂರ್ಣವಾಗಿ ಪುನರ್‌ನಿರ್ಮಿಸಿ, ಕೇರಳ ಶೈಲಿಯ ವಾಸ್ತುಶಿಲ್ಪದಲ್ಲಿ ಹೊಸ ರೂಪ ನೀಡಿದರು. ಈ ವಿಶಿಷ್ಟ ವಾಸ್ತು ಶೈಲಿಯು ಇಂದಿಗೂ ಯಾವುದೇ ಬದಲಾವಣೆ ಇಲ್ಲದೆ ಸಂರಕ್ಷಿಸಿಕೊಂಡು ಬರುತ್ತಿದ್ದಾರೆ.

ರಘುಚಂದ್ರ ಬಳ್ಳಾಲ್ ಅವರ ನಂತರ, ಶ್ರೀನಿವಾಸ ಬಲ್ಲಾಲ್ ಅವರು ಇದರ ಆಡಳಿತವನ್ನು ನೋಡಿಕೊಂಡು ಬಂದರು. ಅವರ ನಿಧನದ ಬಳಿಕ, ಅವರ ಕುಟುಂಬದವರು ಇಂದಿಗೂ ಈ ಬಸದಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ.

ಬಸದಿಯ ಮೂಲ ದೇವರು ಶಾಂತಿನಾಥ ಸ್ವಾಮಿ. ನಂತರ ದೊಡ್ಡ ಮೂರ್ತಿಯ ಅಗತ್ಯವಿರುವುದರಿಂದ ಆದಿನಾಥ ಸ್ವಾಮಿಯ ಮೂರ್ತಿಯನ್ನು ತರಿಸಲಾಯಿತು. ಇದರ ಜೊತೆಗೆ ಮಲ್ಲಿನಾಥ ಸ್ವಾಮಿಯೂ ಇಲ್ಲಿ ಪೂಜಿಸಲ್ಪಡುತ್ತಾರೆ. ಈ ರೀತಿ ಮೂರು ತೀರ್ಥಂಕರರ ಆರಾಧನೆ ಇಲ್ಲಿ ನಡೆದುಕೊಂಡು ಬರುತ್ತಿದೆ .

ಈ ಪ್ರದೇಶವು ರಾಣಿ ಅಬ್ಬಕ್ಕ ದೇವಿಯ ಆಡಳಿತದಲ್ಲಿತ್ತು. ನಂತರ ಹೇಗೆ ಈ ಬಸದಿ ಬಳ್ಳಾಲ್ ಕುಟುಂಬದ ಅಧೀನಕ್ಕೆ ಬಂತು ಎಂಬುದು ಸ್ಪಷ್ಟವಾಗಿಲ್ಲ. ಬ್ರಿಟಿಷರ ಕಾಲದಲ್ಲಿ ಈ ಸ್ವಾಮ್ಯ ಹಸ್ತಾಂತರವಾಗಿರಬಹುದು ಎಂಬುದು ಕೇವಲ ಅಂದಾಜು ಎಂದಿದ್ದಾರೆ.

ದೇವರುಗಳು

ದೇವಾಲಯದಲ್ಲಿ ಆದಿನಾಥ ಸ್ವಾಮಿ , ಶಾಂತಿನಾಥ , ಮಹಾವೀರ ಸ್ವಾಮಿ , ಮಲ್ಲಿನಾಥ ಸ್ವಾಮಿ , ಸರಸ್ವತಿ ದೇವಿ , ಪದ್ಮಾವತಿ ದೇವಿ ಕ್ಷೇತ್ರಪಾಲ , ನಾಗದೇವರು , ಬ್ರಹ್ಮ ದೇವರನ್ನು ಪೂಜಿಸಿಕೊಂಡು ಬರಲಾಗುತ್ತದೆ .

ಪೂಜಾದಿ ಕಾರ್ಯಗಳು

ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ ಸುಮಾರು 7:30ರ ವೇಳೆಗೆ ಪಂಚಾಮೃತ ಪೂಜೆ ನಡೆಯುತ್ತದೆ. ಸಂಜೆ ಕೂಡ ಇದೇ ಸಮಯದಲ್ಲಿ ಪೂಜೆ ನಡೆಯುತ್ತದೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳು ಹಾಗೂ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನೆರವೇರುತ್ತವೆ.

ದೇವಾಲಯದ ಸುತ್ತಲೂ ಅದ್ಬುತವಾದ ಕೆತ್ತನೆಗಳು ಮನಮೋಹಕವಾಗಿದ್ದು ದ್ರಾವಿಡ ವಾಸ್ತು ಶೈಲಿಯಲ್ಲಿ ದೇವಾಲಯ ಇದೆ. ಎರಡು ಅಂತಸ್ತಿನ ಮಹಡಿ ಇದ್ದು ಮೇಲೆ ಮತ್ತು ಕೆಳಗೆ ಪೂಜಾದಿ ಕಾರ್ಯಗಳು ನಡೆಯುತ್ತದೆ.

ಕೊನೆಯಲ್ಲಿ….!

ಸಂಕ್ಷಿಪ್ತವಾಗಿ ಹೇಳುವುದಾದರೆ, ದಾಖಲೆಗಳ ಕೊರತೆಯಿದ್ದರೂ, ಈ ಬಸದಿ ಮಂಗಳೂರಿನ ಜೈನ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಜೀವಂತ ಸಾಕ್ಷಿಯಾಗಿದೆ.

ಗಿರೀಶ್ ಪಿಎಂ, ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!