ಕಾಸರಗೋಡು, ಮೇ 7: ಕಾರಿನ ಸೈಲೆನ್ಸರ್ನಲ್ಲಿ ಅಕ್ರಮ ಬದಲಾವಣೆ ಮಾಡಿ ಬೆಂಕಿ ಹಾಗೂ ಹೊಗೆ ಹೊರಸೂಸುವ ರೀತಿಯಲ್ಲಿ ವಾಹನ ಚಲಾಯಿಸಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೀಂಜದ ಕೌಚ್ಚಿಲ್ ಚಾರ್ಲೆಯ ನಿವಾಸಿ ಅಹ್ಮದ್ ಬಿಲಾಲ್ (19) ಹಾಗೂ ಬಂಬ್ರಾಣದ ಹಸೈನಾರ್ (22) ಬಂಧಿತ ಆರೋಪಿಗಳು. ಪೊಲೀಸರು ಹೋಂಡಾ ಕಾರನ್ನೂ ವಶಕ್ಕೆ ಪಡೆದಿದ್ದಾರೆ.
ಘಟನೆ ಮಂಗಳವಾರ ಉಪ್ಪಳದಲ್ಲಿ ನಡೆದಿತ್ತು. ಅತಿಯಾದ ಶಬ್ದದೊಂದಿಗೆ ಸಂಚರಿಸುತ್ತಿದ್ದ ಕಾರಿನ ಸೈಲೆನ್ಸರ್ನಿಂದ ಬೆಂಕಿ ಮತ್ತು ಹೊಗೆ ಹೊರಬರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣ Instagramನಲ್ಲಿ ವೈರಲ್ ಆಗಿತ್ತು.
ಈ ವಿಡಿಯೊ ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಯಿತು. ಪರಿಶೀಲನೆ ವೇಳೆ ಕಾರಿನ ಎರಡೂ ಬದಿಗಳಲ್ಲೂ ನಂಬರ್ ಪ್ಲೇಟ್ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ವೈಷ್ಣವ್ ರಾಮಚಂದ್ರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.