ಕೇರಳ ಸಿಎಂ ಆಯ್ಕೆ ಕುತೂಹಲ: ಯುಡಿಎಫ್ ಭರ್ಜರಿ ಗೆಲುವಿನ ಬಳಿಕವೂ ಕಾಂಗ್ರೆಸ್‌ನಲ್ಲಿ ಮುಂದುವರಿದ ಸಸ್ಪೆನ್ಸ್

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಯುಡಿಎಫ್ ಅಧಿಕಾರಕ್ಕೇರಿದರೂ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತ ಕಾಂಗ್ರೆಸ್‌ನ ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗದೆ ರಾಜಕೀಯ ವಲಯದಲ್ಲಿ ಕುತೂಹಲ ಮುಂದುವರಿದಿದೆ. ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದರೂ ಸಿಎಂ ಘೋಷಣೆಯಲ್ಲಿ ಆಗುತ್ತಿರುವ ವಿಳಂಬ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಿಎಂ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಮೂವರು ನಾಯಕರೊಂದಿಗೆ ಪಕ್ಷದ ಹೈಕಮಾಂಡ್ ಈಗಾಗಲೇ ಪ್ರತ್ಯೇಕವಾಗಿ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ.

ದೆಹಲಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್, ಸಿಎಂ ಆಯ್ಕೆ ಕುರಿತು ಮತ್ತೊಂದು ಸುತ್ತಿನ ಮಾತುಕತೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಎಲ್ಲ ನಾಯಕರು ವಿವಾದಾತ್ಮಕ ಹೇಳಿಕೆಗಳು ಹಾಗೂ ನಡೆಗಳಿಂದ ದೂರ ಇರಬೇಕೆಂದು ಪಕ್ಷದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಆದರೆ ಮುಖ್ಯಮಂತ್ರಿ ಹೆಸರನ್ನು ಯಾವಾಗ ಘೋಷಿಸಲಾಗುತ್ತದೆ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಯುಡಿಎಫ್ ಮೈತ್ರಿ ಪಕ್ಷಗಳೊಂದಿಗೆ ಈ ವಿಚಾರ ಚರ್ಚೆಯಾಗುತ್ತದೆಯೇ ಎಂಬ ಪ್ರಶ್ನೆಗೆ, ಅದು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ಅವರ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿ ಕೆ.ಸಿ. ವೇಣುಗೋಪಾಲ್, ವಿರೋಧ ಪಕ್ಷದ ಮಾಜಿ ನಾಯಕ ವಿ.ಡಿ. ಸತೀಶನ್ ಹಾಗೂ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಕೇಳಿಬರುತ್ತಿವೆ. ಮೂವರೂ ಅಂತಿಮ ಆಯ್ಕೆ ತಮ್ಮ ಪರವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಇದರಲ್ಲಿ ವಿಶೇಷವಾಗಿ ಕೆ.ಸಿ. ವೇಣುಗೋಪಾಲ್ ಬಣ, ಪಕ್ಷದ ಅತಿಹೆಚ್ಚು ಶಾಸಕರ ಅಭಿಪ್ರಾಯವನ್ನು ಹೈಕಮಾಂಡ್ ಗೌರವಿಸಲಿದೆ ಎಂಬ ನಿರೀಕ್ಷೆಯಲ್ಲಿದೆ. ಹೀಗಾಗಿ ಕೇರಳದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಇನ್ನೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!