ತಿರುವನಂತಪುರಂ: 2026ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಮರಳಿದ ಬಳಿಕ ಮುಖ್ಯಮಂತ್ರಿ ಆಯ್ಕೆ ಕುರಿತ ಕುತೂಹಲಕ್ಕೆ ಇದೀಗ ಅಂತಿಮ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂದು ವಾರಕ್ಕೂ ಹೆಚ್ಚು ಕಾಲ ಕಳೆದಿದ್ದರೂ ಮುಖ್ಯಮಂತ್ರಿ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಿಸಿರಲಿಲ್ಲ. ಇದರಿಂದ ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು.
ಈ ಹಿನ್ನೆಲೆ ಇಂದು ದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರು ಹಾಗೂ ಕೇರಳದ ಪ್ರಮುಖ ಶಾಸಕರು ಭಾಗವಹಿಸಿ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದರು. ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖ ಪೈಪೋಟಿದಾರರಾಗಿ ಪರಿಗಣಿಸಲ್ಪಟ್ಟಿದ್ದ K. C. Venugopal, V. D. Satheesan ಹಾಗೂ Ramesh Chennithala ಅವರ ಹೆಸರುಗಳು ಚರ್ಚೆಗೆ ಬಂದವು.
ಆದರೆ ಸಭೆಯ ವೇಳೆ ಬಹುತೇಕ ಕಾಂಗ್ರೆಸ್ ನಾಯಕರು ಕೆ.ಸಿ. ವೇಣುಗೋಪಾಲ್ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಸಂಘಟನೆ ಹಾಗೂ ರಾಷ್ಟ್ರೀಯ ರಾಜಕೀಯದಲ್ಲಿ ಅನುಭವ, ಹೈಕಮಾಂಡ್ನೊಂದಿಗೆ ಇರುವ ನಿಕಟ ಸಂಪರ್ಕ ಮತ್ತು ಪಕ್ಷದೊಳಗಿನ ಒಪ್ಪಿಗೆಯೇ ಅವರ ಪರ ಬಲವಾಗಿ ಕೆಲಸ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೇ 4ರಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಯುಡಿಎಫ್ ಎಡಪಕ್ಷಗಳ ಹತ್ತು ವರ್ಷದ ಆಡಳಿತಕ್ಕೆ ತೆರೆ ಎಳೆದು ಮತ್ತೆ ಅಧಿಕಾರಕ್ಕೇರಿತ್ತು. ಈ ಜಯವನ್ನು ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವಾಗಿ ಪರಿಗಣಿಸಿದ್ದು, ಹೊಸ ಸರ್ಕಾರದ ರಚನೆಗೆ ಸಂಬಂಧಿಸಿದ ಚಟುವಟಿಕೆಗಳು ಇದೀಗ ವೇಗ ಪಡೆದಿವೆ.