ದೂರದ ಕಾಂಕ್ರೀಟ್ ಕಾಡಿನಿಂದ, ಎಸಿ ಕಾರುಗಳ ಸದ್ದಿನ ನಡುವೆ ಬರುವ ಪಟ್ಟಣದ ಮಂದಿಗೆ ಹಳ್ಳಿ ಎಂಬುದು ಕೇವಲ ಒಂದು ವಾರಾಂತ್ಯದ ಆಕರ್ಷಕ ತಾಣ. ನಗರದ ಉಸಿರುಗಟ್ಟಿಸುವ ವಾತಾವರಣ, ಯಾಂತ್ರಿಕ ಬದುಕಿನ ಜಂಜಾಟದಿಂದ ಬೇಸತ್ತವರಿಗೆ ಹಳ್ಳಿಯ ಹಸಿರು ಹೊದಿಕೆ ಮತ್ತು ಶುದ್ಧ ಗಾಳಿ ಒಂದು ‘ಲಕ್ಸುರಿ’. ಬೇಸಿಗೆಯ ರಜೆ ಆರಂಭವಾಯಿತೆಂದರೆ ಸಾಕು, ಮೆಟ್ರೋಪಾಲಿಟನ್ ಮಂದಿ ತಮ್ಮ ಮಕ್ಕಳನ್ನು ಕರೆದುಕೊಂಡು ತಮ್ಮ ಮೂಲವನ್ನರಸಿ ಹಳ್ಳಿಯತ್ತ ಹೆಜ್ಜೆ ಹಾಕುತ್ತಾರೆ. ಅಲ್ಲಿನ ಹೊಸ ತಲೆಮಾರಿನ ಮಕ್ಕಳಿಗೆ ಮಣ್ಣಿನ ಸೊಗಡು ಆಪ್ತವಾಗುತ್ತದೆ. ಆದರೆ, ಈ ಸಂಭ್ರಮ ಕೇವಲ ತಾತ್ಕಾಲಿಕ. ರಜೆ ಮುಗಿಸಿ ಅವರು ಆಂಗ್ಲ ಭಾಷೆಯಲ್ಲಿ “ಟಾಟಾ-ಬೈ ಬೈ, ಸೀ ಯೂ” ಎನ್ನುತ್ತಾ ಕಾರು ಹತ್ತಿ ಹೊರಟಾಗ, ಇಲ್ಲಿನ ಮುಗ್ಧ ಮನಸ್ಸುಗಳು ಕಂಗಾಲಾಗುತ್ತವೆ. ಹಳ್ಳಿಯ ಹಿರಿಯರ ಕಣ್ಣುಗಳು ಮಂಜಾಗುತ್ತವೆ. ನಗರದ ಮಂದಿಗೆ ಅದು ಕೇವಲ ಒಂದು ಪ್ರವಾಸದ ಅಂತ್ಯ, ಆದರೆ ಹಳ್ಳಿಯವನಿಗೆ ಅದು ಮತ್ತೆ ಆರಂಭವಾಗುವ ಏಕಾಂಗಿ ಹೋರಾಟದ ಮುನ್ನುಡಿ. ಏಕೆಂದರೆ, ನಗರದ ವೈಭವಕ್ಕೆ ಹಳ್ಳಿಯ ಬೆವರೇ ಅಡಿಪಾಯ ಎಂಬ ಸತ್ಯ ಪಟ್ಟಣದ ಮಂದಿಗೆ ತಿಳಿದಿರುವುದಿಲ್ಲ.
ನಗರದ ಮಂದಿಗೂ ಸಂಘರ್ಷಗಳಿರಬಹುದು, ಅವರದೂ ಒತ್ತಡದ ಬದುಕೇ ಇರಬಹುದು. ಆದರೆ ಕೃಷಿಕನ ಸಂಘರ್ಷಕ್ಕೂ ನಗರದವನ ಸಂಘರ್ಷಕ್ಕೂ ಆಕಾಶ ಭೂಮಿಯ ಅಂತರವಿದೆ. ಮಣ್ಣು ಮತ್ತು ಬೆವರನ್ನು ನಂಬಿ ಬದುಕುವವನ ಬಗ್ಗೆ ಇಂದಿಗೂ ಸಮಾಜದಲ್ಲಿ ಒಂದು ರೀತಿಯ ಕೀಳರಿಮೆ ಮನೆಮಾಡಿರುವುದು ಅತಿ ದೊಡ್ಡ ದುರಂತ. ಕೃಷಿಕನೆಂದರೆ ಯಾರೋ ಒಬ್ಬ ಮುಗ್ಧ, ಅಜ್ಞಾನಿ ಎಂಬ ಅವಗಣನೆ ಯಾಕೆ? ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಲ್ಯಾಪ್‌ಟಾಪ್ ಕೀಬೋರ್ಡ್ ಕುಟ್ಟುವ ಬೆರಳುಗಳಿಗೆ ಸಿಗುವ ಗೌರವ, ನೂರು ಕೋಟಿ ಜನರ ಹೊಟ್ಟೆ ತುಂಬಿಸಲು ಮಣ್ಣಿನಲ್ಲಿ ಬೆವರುವ ಬೆರಳುಗಳಿಗೆ ಸಿಗುತ್ತಿಲ್ಲವೇಕೆ? ಹೊಟ್ಟೆ ತುಂಬಿಸುವ ಅನ್ನದ ಮೂಲ ನೆಲವೆಂದು ತಿಳಿದಿದ್ದರೂ, ಆ ನೆಲವನ್ನೇ ನಂಬಿದವನನ್ನು ಕೀಳಾಗಿ ಕಾಣುವ ಈ ಮನಸ್ಥಿತಿಯೇ ಸಮಾಜದ ದೊಡ್ಡ ರೋಗ. ನೆನಪಿರಲಿ, ಮಣ್ಣಿನ ಸೊಗಡು ಗೊತ್ತಿಲ್ಲದವನಿಗೆ ಬದುಕಿನ ಬೆಲೆ ತಿಳಿಯದು.
ಕೃಷಿಕನ ಬದುಕು ಅಂದುಕೊಂಡಷ್ಟು ಸರಳವಲ್ಲ. ಪಟ್ಟಣದವರು ಹಳ್ಳಿಯ ದೃಶ್ಯ ವೈಭವವನ್ನು ಆನಂದಿಸುತ್ತಿರುವಾಗಲೇ ರೈತ ಮಳೆಗಾಲದ ಭೀಕರ ಸಿದ್ಧತೆಯಲ್ಲಿರುತ್ತಾನೆ. ಸುರಿಯುವ ಮಳೆಗೆ ಸೋರದಂತೆ ಛಾವಣಿ ಸರಿಪಡಿಸಬೇಕು, ಕಟ್ಟಿಗೆ ಶೇಖರಿಸಬೇಕು, ಹಟ್ಟಿಗೆ ತರಗೆಲೆಗಳನ್ನು ತರಬೇಕು. ಗದ್ದೆ ಬೇಸಾಯದ ಮಂದಿ ಬಿತ್ತನೆಗೆ ಸಜ್ಜಾದರೆ, ತೋಟದ ಮಂದಿ ಕೃಷಿ ಕಾರ್ಯಗಳ ಒತ್ತಡದಲ್ಲಿ ಸಿಲುಕಿರುತ್ತಾರೆ. ಹೊರಗಿನ ಲೋಕಕ್ಕೆ ಅಡಿಕೆಗೆ ಭರ್ಜರಿ ಬೆಲೆಯಿದೆ ಎಂಬ ಸುದ್ದಿ ಮಾತ್ರ ತಲುಪುತ್ತದೆ. ಆದರೆ ಆ ಬೆಲೆಯ ಲಾಭ ರೈತನ ಕೈ ಸೇರುವ ಮೊದಲೇ ಪ್ರಕೃತಿಯ ವಿಕೋಪಗಳು ಅವನ ಬೆನ್ನು ಹತ್ತಿರುತ್ತವೆ. ತೆಂಗಿನ ತೋಟಗಳಿಗೆ ಲಗ್ಗೆ ಇಡುವ ಮಂಗಗಳು ಮತ್ತು ಕೆಂದಳಿಲುಗಳು ಎಳನೀರನ್ನೇ ಕಿತ್ತು ತಿಂದು ರೈತನ ಭವಿಷ್ಯಕ್ಕೆ ಕೊಳ್ಳಿ ಇಡುತ್ತವೆ. ನೂರು ಮರದಿಂದ ನೂರಾರು ಕಾಯಿಗಳು ಸಿಗಬೇಕಾದ ಜಾಗದಲ್ಲಿ, ಮಂಗಗಳ ಉಪಟಳದಿಂದ ಕೇವಲ ಮುನ್ನೂರೋ ಐನೂರೋ ಕಾಯಿಗಳು ಸಿಕ್ಕರೆ ಅದು ಲಾಭವೆನಿಸಿಕೊಳ್ಳುವುದೇ? ಮೂರೆಕ್ರೆ ತೋಟದ ಮೆಣಸಿನ ಫಸಲು ಕೇವಲ 40 ಕೆಜಿಗೆ ಸೀಮಿತವಾದರೆ, ಆ ಕುಟುಂಬದ ಬದುಕು ಹೇಗೆ ಸಾಗಬೇಕು? ನಿಜಕ್ಕೂ ಕೃಷಿಕನ ಕಣ್ಣೀರು ದೇಶದ ಬಡತನದ ಸಂಕೇತ.
ಕೃಷಿಕನಿಗೆ ಸಂಕಷ್ಟಗಳು ಸಾಲಾಗಿ ಬರುತ್ತವೆ. ಬ್ಯಾಂಕಿನಿಂದ ಬರುವ ಸಾಲದ ರಿನೀವಲ್ ನೋಟಿಸ್‌ಗಳು ಅವನ ನಿದ್ದೆ ಕೆಡಿಸಿದರೆ, ಮತ್ತೊಂದೆಡೆ ತಲೆತಲಾಂತರದ ಗಡಿ ವಿವಾದಗಳ ಸಿವಿಲ್ ಕೇಸಿನ ಲಾಯರ್ ನೋಟಿಸ್‌ಗಳು ಅವನ ನೆಮ್ಮದಿಯನ್ನು ಕಸಿದುಕೊಳ್ಳುತ್ತವೆ. ಬೇಸಿಗೆಯಲ್ಲಿ ಮೋಟಾರ್ ಪಂಪು ಕೈಕೊಟ್ಟಾಗ, ತಿಂಗಳುಗಟ್ಟಲೆ ನೀರಿಲ್ಲದೆ ಕಣ್ಣೆದುರೇ ಒಣಗುವ ತೋಟದ ದಯನೀಯ ಸ್ಥಿತಿ ನೋಡಲು ಎರಡು ಕಣ್ಣು ಸಾಲವು. ಇತ್ತ ಮನುಷ್ಯರ ಬವಣೆಯಾದರೆ, ಅತ್ತ ಹಸು-ಎಮ್ಮೆಗಳ ರೋಗಬಾಧೆ, ಮನೆಯ ಹಿರಿಯರ ಆರೋಗ್ಯ ಸಮಸ್ಯೆಗಳು… ಎಲ್ಲವನ್ನೂ ಒಬ್ಬನೇ ರೈತ ತನ್ನ ಹೆಗಲ ಮೇಲೆ ಹೊತ್ತು ಸಾಗಬೇಕು. ಕೂಲಿ ಕಾರ್ಮಿಕರ ಕೊರತೆಯ ನಡುವೆ ಕೃಷಿ ಮಾಡುವುದು ಇಂದು ದೊಡ್ಡ ಸಾಹಸ. ಆದರೂ ಅವನು ಎದೆಗುಂದದೆ ದುಡಿಯುತ್ತಾನೆ, ಏಕೆಂದರೆ ಬೆವರು ಸುರಿಸಿ ಅನ್ನ ನೀಡುವವನೇ ನಿಜವಾದ ದೈವ.
ಇಷ್ಟೆಲ್ಲಾ ಕಷ್ಟಗಳ ನಡುವೆಯೂ ವ್ಯವಸ್ಥೆ ಮಾತ್ರ ರೈತನ ಬಗ್ಗೆ ಅಸಡ್ಡೆಯನ್ನೇ ತೋರುತ್ತಿದೆ. ಸರಕಾರಗಳು ಬರುತ್ತವೆ, ಹೋಗುತ್ತವೆ; ಆದರೆ ರೈತನ ಹಣೆಬರಹ ಮಾತ್ರ ಬದಲಾಗುತ್ತಿಲ್ಲ. ಅಗತ್ಯವಿಲ್ಲದ ಉಚಿತ ಭಾಗ್ಯಗಳನ್ನು ಕರುಣಿಸುವ ಬದಲು, ರೈತನ ಬದುಕಿಗೆ ಭದ್ರತೆ ನೀಡುವ ಯೋಜನೆಗಳು ಬರಬಾರದೇ? ಫಸಲ್ ಬಿಮಾ ಎಂಬುದು ಕೇವಲ ಅಂಕಿ-ಅಂಶಗಳ ಆಟವಾಗದೆ, ನೊಂದ ಕೃಷಿಕನ ಕೈ ಹಿಡಿಯುವ ಆಸರೆಯಾಗಬೇಕು. ಸಾಲದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು, ರೈತರಿಗೆ ಜೀವವಿಮೆ ಸಿಗಬೇಕು ಮತ್ತು ಅವರ ಮಕ್ಕಳಿಗೆ ಶಿಕ್ಷಣದಲ್ಲಿ ವಿಶೇಷ ಪ್ರೋತ್ಸಾಹ ನೀಡಬೇಕು. ಕೇವಲ ಕೃಷಿಯಿಂದ ಬದುಕು ಕಷ್ಟವಿರುವ ಈ ಕಾಲದಲ್ಲಿ, ಸೈಡ್ ಬಿಸಿನೆಸ್‌ಗಳಿಗೆ ಹೆಚ್ಚಿನ ಬೆಂಬಲ ನೀಡಬೇಕಾದ ಅಗತ್ಯವಿದೆ.
ಇವತ್ತು ಇಡೀ ಜಗತ್ತು ಓದಿನಲ್ಲೇ ಮಗ್ನವಾಗಿದೆ. ಎಲ್ಲರೂ ನಗರದ ಆಫೀಸುಗಳಿಗೆ ಸೇರಿದರೆ, ಹೊಟ್ಟೆ ತುಂಬಿಸುವ ಕಾರ್ಯ ಯಾರಿಂದಾದೀತು? ರೈತ ಮಗನೆಂಬ ಕಾರಣಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕುವ ಸಮಾಜವಿದು. ಅನ್ನದಾತನಿಗಿಂತಲೂ ತಿಂಗಳ ಸಂಬಳ ಪಡೆಯುವ ಗುಮಾಸ್ತನೇ ಇಲ್ಲಿ ಮೇಲರಿಮೆಯ ಸಂಕೇತವಾಗಿರುವುದು ನೋವಿನ ಸಂಗತಿ. ಒಂದೇ ತಾಯಿಯ ಮಕ್ಕಳಲ್ಲಿ ಒಬ್ಬ ನಗರ ಸೇರಿದರೆ, ಉಳಿದವನು ಹಸು, ತೋಟ ಮತ್ತು ಮನೆಯ ಜವಾಬ್ದಾರಿ ಹೊರುತ್ತಾನೆ. ನಗರದ ಮಂದಿಗೆ ಹಸುವಿನ ‘ಅಂಬಾ’ ಕೂಗು ಭಾವನಾತ್ಮಕವಾಗಿ ಕೇಳಬಹುದು, ಆದರೆ ದಿನವಿಡೀ ದುಡಿಯುವ ಹಳ್ಳಿಯ ರೈತನಿಗೆ ಅದು ಜೀತದಾಳಿನ ಕೂಗಿನಂತೆ ಕೇಳಿಸುತ್ತದೆ. ಆದರೂ ಅವನು ಸಹನೆಯಿಂದ ದುಡಿಯುತ್ತಿದ್ದಾನೆ.
ಕೊನೆಯದಾಗಿ ಹೇಳುವುದಿಷ್ಟೇ, ಹಳ್ಳಿ ಎಂಬುದು ಕೇವಲ ದೃಶ್ಯಕ್ಕೆ ಸಿಗುವ ಸ್ವರ್ಗವಲ್ಲ; ಅದು ನಿರಂತರ ಸಂಘರ್ಷದ
ತಾಣ. ನಾವು ತಿನ್ನುವ ಪ್ರತಿ ತುತ್ತು ಅನ್ನದ ಹಿಂದೆ ರೈತನ ಬೆವರ ಹನಿಯಿದೆ ಎಂಬ ಅರಿವು ಪ್ರತಿಯೊಬ್ಬರಿಗೂ ಇರಲಿ. ಕೃಷಿಯನ್ನು ಗೌರವಿಸುವುದು ಎಂದರೆ ನಮ್ಮ ಅಸ್ತಿತ್ವವನ್ನು ಗೌರವಿಸುವುದು. ಮಣ್ಣನ್ನು ಪ್ರೀತಿಸುವವನನ್ನು ಕೀಳಾಗಿ ಕಾಣಬೇಡಿ. ಏಕೆಂದರೆ, ನಗರದ ಸಕಲ ಸೌಕರ್ಯಗಳ ನಡುವೆ “ಟಾಟಾ-ಬೈ ಬೈ” ಹೇಳಿ ಹೊರಡುವ ಸಂಸ್ಕೃತಿ ತಟ್ಟೆಯ ಅನ್ನವನ್ನು ಕೊಡಲಾರದು. ಅನ್ನದಾತನ ಬವಣೆಗೆ ಸ್ಪಂದಿಸದ ಸಮಾಜಕ್ಕೆ ಭವಿಷ್ಯವಿಲ್ಲ. ಭರವಸೆಯ ಎಳೆಯನ್ನೇ ಉಸಿರಾಗಿಸಿಕೊಂಡು, ಮೌನವಾಗಿ ಮಣ್ಣಿನ ಸೇವೆ ಮಾಡುವ ಈ ಶ್ರಮಜೀವಿಗಳಿಗೆ ನ್ಯಾಯ ಸಿಗುವ ಕಾಲ ಬಂದಾಗ ಮಾತ್ರ ಈ ದೇಶದ ಹಸಿವು ಮತ್ತು ಹಸಿರು ಎರಡೂ ಉಳಿಯಲು ಸಾಧ್ಯ. ನೆನಪಿರಲಿ, ರೈತ ಬದುಕಿದರೆ ಮಾತ್ರ ಜಗತ್ತು ಉಣಬಲ್ಲದು!
✍️ ದಯಾನಂದ ರೈ ಕಳ್ವಾಜೆ