ಹಂದಿ ಸಾಕಾಣಿಕೆಯಿಂದ ಶಾಲಾ ಮಕ್ಕಳಿಗೆ ತೊಂದರೆ ಆರೋಪ: ಕೇಂದ್ರ ತೆರವಿಗೆ ಒತ್ತಾಯ

ಬಂಟ್ವಾಳ: ಖಾಸಗಿ ಜಮೀನಿನಲ್ಲಿ ನಡೆಯುತ್ತಿರುವ ಹಂದಿ ಸಾಕಾಣಿಕೆಯಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದು, ಸಂಬಂಧಿತ ಕೇಂದ್ರವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಇರ್ಪಾನ್ ಬೋಳಿಯಾರ್ ಒತ್ತಾಯಿಸಿದ್ದಾರೆ.

ಬಿಸಿರೋಡಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೆದೂರು ಚರ್ಚ್ ಸಮೀಪ ಕಾರ್ಯನಿರ್ವಹಿಸುತ್ತಿರುವ ಹಂದಿ ಸಾಕಾಣಿಕೆ ಕೇಂದ್ರದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಶಾಲಾ ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ಹಂದಿ ಶೆಡ್‌ನ ಮಲ ಮತ್ತು ಮೂತ್ರವನ್ನು ಪೈಪ್ ಮೂಲಕ ಸಮೀಪ ಹರಿಯುವ ತೋಡಿಗೆ ಹರಿಬಿಡಲಾಗುತ್ತಿದೆ. ಈ ನೀರು ನೇತ್ರಾವತಿ ನದಿ ಅಣೆಕಟ್ಟಿನಲ್ಲಿ ಶೇಖರಿಸಲಾದ ನೀರಿನೊಂದಿಗೆ ಸೇರುತ್ತಿದೆ ಎಂದು ಆರೋಪಿಸಿದ ಅವರು, ಇದರಿಂದ ಇಡೀ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದೆ ಎಂದರು.

ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ದುರ್ವಾಸನೆ ಹೆಚ್ಚಾಗುತ್ತಿದ್ದು, ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಚರ್ಚ್‌ಗೆ ಬರುವ ಭಕ್ತರಿಗೂ ತೊಂದರೆಯಾಗುತ್ತಿದೆ ಎಂದು ಅವರು ದೂರಿದರು.

ಕೆಲವೇ ದಿನಗಳಲ್ಲಿ ಶಾಲೆ ಪುನರಾರಂಭವಾಗಲಿದ್ದು, ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇರ್ಪಾನ್ ಬೋಳಿಯಾರ್ ಹೇಳಿದರು. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯತ್‌ಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯತ್ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಹಿಮಾನ್ ಬೋಳಿಯಾರ್, ಇಮ್ತಿಯಾಜ್ ಬೋಳಾರ್, ವಿನ್ಸೆಂಟ್ ಸಲ್ಡಾನ ಹಾಗೂ ಅಶ್ರಫ್ ಬೋಳ್ಯಾರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!