ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿದ್ದ ನಟ ಮತ್ತು ನಿರ್ಮಾಪಕ
ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಮನೆಯಲ್ಲೇ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರಾದರೂ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಅವರ ಮೃತದೇಹವನ್ನು ನಗರದ ಅಪೋಲೋ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಚಿತ್ರರಂಗದ ಅನೇಕ ಕಲಾವಿದರು, ನಿರ್ದೇಶಕರು ಹಾಗೂ ಅಭಿಮಾನಿಗಳು ಭೇಟಿ ನೀಡಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಮಾನಿಗಳು ಮತ್ತು ಸಿನಿತಾರೆಯರು ಸಂತಾಪ ಸೂಚಿಸಿದ್ದಾರೆ.
ದಿಲೀಪ್ ರಾಜ್ ಅವರು ಕನ್ನಡ ಸಿನಿಮಾರಂಗ ಹಾಗೂ ಕಿರುತೆರೆಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು. ಧಾರಾವಾಹಿಗಳ ಮೂಲಕ ಅಪಾರ ಜನಪ್ರಿಯತೆ ಪಡೆದ ಅವರು, ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದರು.
ಚಿತ್ರರಂಗದಲ್ಲಿಯೂ ಅವರು ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು.ಮಿಲನಾ, ಯು ಟರ್ನ್, ಆರ್ಕೆಸ್ಟ್ರಾ ಮೈಸೂರು ಹಾಗೂನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಪುನೀತ್ ರಾಜ್ ಕುಮಾರ್ ಅಭಿನಯದ ‘ಮಿಲನ’ ಚಿತ್ರದಲ್ಲಿ ಅವರು ಖಳನಟನ ಪಾತ್ರದ ಮೂಲಕ ವಿಶೇಷ ಗಮನಸೆಳೆದಿದ್ದರು.
ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿದ್ದಲವ್ ಮಾಕ್ಟೇಲ್ 3 ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಇದೇ ಅವರ ಕೊನೆಯ ಸಿನಿಮಾ ಎಂದು ತಿಳಿದುಬಂದಿದೆ.
ಕಿರುತೆರೆಯಲ್ಲಿಯೂ ದಿಲೀಪ್ ರಾಜ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಪಾರು ಹಾಗೂ ನಾ ನಿನ್ನ ಬಿಡಲಾರೆ ಧಾರಾವಾಹಿಗಳ ನಿರ್ಮಾಣದಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. ಸಿನಿಮಾ ಹಾಗೂ ಧಾರಾವಾಹಿ ಕ್ಷೇತ್ರ ಎರಡರಲ್ಲಿಯೂ ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು, ಕನ್ನಡ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು