ಕರಾವಳಿಯ ಕ್ರಿಕೆಟ್ ಜಾತ್ರೆಗೆ ಸಜ್ಜಾದ ಬಂಟ್ವಾಳದ ನಂದಾವರ:ಕಾಂಗ್ರೆಸ್ ಟ್ರೋಪಿ–2026ಕ್ಕೆ ಭರ್ಜರಿ ಸಿದ್ಧತೆ

ಬಂಟ್ವಾಳ ತಾಲೂಕಿನಲ್ಲಿ ಅಂಡರ್ ಆರ್ಮ್ ಕ್ರಿಕೆಟ್‌ಗೆ ಹೊಸ ಮೆರುಗು ನೀಡುವ ಬೃಹತ್ ಮಟ್ಟದ “ಕಾಂಗ್ರೆಸ್ ಟ್ರೋಪಿ–2026” ಪಂದ್ಯಾಕೂಟ ಮೇ 16 ಮತ್ತು 17ರಂದು ನಂದಾವರ ಶಾರದ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡು ದಿನಗಳ ಕಾಲ ಹೊನಲು ಬೆಳಕಿನ ಆರ್ಹನಿಶಿ ಕ್ರೀಡಾಜಾತ್ರೆಗೆ ವೇದಿಕೆ ಸಜ್ಜಾಗಿದೆ. ಕರಾವಳಿಯ ಕ್ರೀಡಾಭಿಮಾನಿಗಳ ಅಚ್ಚುಮೆಚ್ಚಿನ ಅಂಡರ್ ಆರ್ಮ್ ಕ್ರಿಕೆಟ್ ಅನ್ನು ವೈಭವೀಕರಿಸುವ ಉದ್ದೇಶದಿಂದ ಆಯೋಜಕರು ಅದ್ದೂರಿ ಸಿದ್ಧತೆ ಕೈಗೊಂಡಿದ್ದಾರೆ.

ಪಂದ್ಯಾಕೂಟದಲ್ಲಿ ಪ್ರಥಮ ಬಹುಮಾನವಾಗಿ ₹5 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಕ್ಕೆ ₹2.5 ಲಕ್ಷ ನಗದು ಬಹುಮಾನ ಜೊತೆಗೆ ಗಾಜು-ಬೆಳ್ಳಿ ಲೇಪಿತ ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತಿದೆ. ಕರಾವಳಿ ಭಾಗದ ಎಂಟು ಪ್ರತಿಷ್ಠಿತ ತಂಡಗಳು ಹಾಗೂ ಸ್ಥಳೀಯ 16 ತಂಡಗಳು ಭಾಗವಹಿಸಲಿದ್ದು, ಕ್ರೀಡಾಂಗಣದಲ್ಲಿ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಈಗಾಗಲೇ ತಂಡಗಳಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.
ಆಧುನಿಕ ಶೈಲಿಯ ಕ್ರೀಡಾಕೂಟಕ್ಕೆ ತಕ್ಕಂತೆ ಮೈದಾನದಲ್ಲಿ ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಲಾಗುತ್ತಿದೆ.

ಅಂಪೈರ್‌ಗಳು, ಸಿಬ್ಬಂದಿಗಳು, ತಾಂತ್ರಿಕ ತಂಡ ಹಾಗೂ ಇನ್ನಿತರ ಕಾರ್ಯಕರ್ತರಿಗೆ ಸಮವಸ್ತ್ರ ವ್ಯವಸ್ಥೆ ಮಾಡಲಾಗಿದ್ದು, ಪಂದ್ಯಾಕೂಟವನ್ನು ವೃತ್ತಿಪರ ಮಟ್ಟದಲ್ಲಿ ಆಯೋಜಿಸಲು ಸಂಘಟಕರು ವಿಶೇಷ ಗಮನ ಹರಿಸಿದ್ದಾರೆ. ಬೆಳಕು, ಧ್ವನಿ ವ್ಯವಸ್ಥೆ ಹಾಗೂ ಪ್ರೇಕ್ಷಕರ ಆಸನ ವ್ಯವಸ್ಥೆಯಲ್ಲೂ ವಿಶೇಷ ಸಿದ್ಧತೆ ನಡೆಯುತ್ತಿದೆ.

ಬಂಟ್ವಾಳದ ಮಾಜಿ ಶಾಸಕರೂ, ಸಚಿವರಾದ ಶ್ರೀ.ಬಿ.ರಮನಾಥ ರೈ,ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರೂ ಹಾಗೂ ವಿಧಾನಪರಿಷತ್ ಶಾಸಕರಾದ ಡಾ.ಶ್ರೀ.ಮಂಜುನಾಥ ಭಂಡಾರಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಶ್ರೀಯುತ ಇನಾಯತ್ ಅಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಅವರ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಆಯೋಜಿಸಲಾಗುತ್ತಿರುವ “ಕಾಂಗ್ರೆಸ್ ಟ್ರೋಪಿ–2026” ಕೇಂದ್ರ ಬಿಂದುಗಳು ಎಂದು ಆಯೋಜಕರು ತಿಳಿಸಿದ್ದಾರೆ

ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರ ಉಪಸ್ಥಿತಿಯಿಂದ ಪಂದ್ಯಾಕೂಟ ಮತ್ತಷ್ಟು ಗಮನ ಸೆಳೆಯುತ್ತಿದೆ. ಕೆ.ಪಿ.ಸಿ.ಸಿ ಅಧ್ಯಕ್ಷರೂ ಉಪಮುಖ್ಯಮಂತ್ರಿಗಳಾದ D. K. ಶಿವಕುಮಾರ್ ಸೇರಿದಂತೆ ಕರ್ನಾಟಕ ಸರಕಾರದ ಸಚಿವರುಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು, ನಾಮನಿರ್ದೇಶಿತ ಸದಸ್ಯರುಗಳು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾಂಗಣದಲ್ಲಿ ಬೃಹತ್ ಗಾತ್ರದ ವೇದಿಕೆ ನಿರ್ಮಾಣಗೊಳ್ಳಲಿದ್ದು, ಕ್ರೀಡೆ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಸಮ್ಮೇಳನದ ಛಾಯೆಯೂ ಕಾರ್ಯಕ್ರಮಕ್ಕೆ ಲಭಿಸುವ ನಿರೀಕ್ಷೆ ವ್ಯಕ್ತವಾಗಿದೆ. ಕರಾವಳಿಯ ಯುವಜನತೆಯಲ್ಲಿ ಈಗಾಗಲೇ ಪಂದ್ಯಾಕೂಟದ ಕುರಿತಾಗಿ ಭಾರಿ ಕುತೂಹಲ ಮೂಡಿದ್ದು, ಸಾವಿರಾರು ಮಂದಿ ಭಾಗವಹಿಸುವ ಸಾಧ್ಯತೆ ಇದೆ.

ಕರಾವಳಿಯ ಅಂಡರ್ ಆರ್ಮ್ ಕ್ರಿಕೆಟ್ ಕೂಟಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಇಷ್ಟೊಂದು ಬೃಹತ್ ಬಹುಮಾನ ಮೊತ್ತದ ಪಂದ್ಯಾಕೂಟ ಆಯೋಜಿಸಲಾಗುತ್ತಿದ್ದು, ಕ್ರೀಡಾಭಿಮಾನಿಗಳಲ್ಲಿ ಭಾರೀ ಕುತೂಹಲ ಮತ್ತು ಸಂಭ್ರಮಕ್ಕೆ ಕಾರಣವಾಗಿದೆ.
ಅಂಡರ್ ಆರ್ಮ್ ಕ್ರಿಕೆಟ್‌ಗೆ ಕರಾವಳಿಯಲ್ಲಿ ವಿಶಿಷ್ಟ ಅಭಿಮಾನಿ ವಲಯವಿದ್ದು, ಕಾಂಗ್ರೆಸ್ ಟ್ರೋಪಿ–2026 ಆ ಕ್ರೀಡೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಪ್ರಯತ್ನವಾಗಿ ಕಾಣಲಾಗುತ್ತಿದೆ. ಕ್ರೀಡೆಯೊಂದಿಗೆ ಸಂಘಟನಾ ಸಾಮರ್ಥ್ಯವನ್ನೂ ಮೆರೆದಿರುವ ಆಯೋಜಕರ ಕಾರ್ಯಪಟುತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!