ಮೋದಿ ಘೋಷಣೆಗಳು ಭಾರತವನ್ನು ಸ್ವಾವಲಂಬಿ ರಾಷ್ಟ್ರದತ್ತ ಕೊಂಡೊಯ್ಯಲಿವೆ: ಸಿ. ಎ. ಎಸ್. ಎಸ್. ನಾಯಕ್

ಮಂಗಳೂರು, ಮೇ 13: ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಪ್ರಕಟಿಸಿದ ಘೋಷಣೆಗಳು ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಿಷ್ಠ, ಸ್ವಾವಲಂಬಿ ಹಾಗೂ ಭವಿಷ್ಯೋನ್ಮುಖವಾಗಿಸುವ ದೂರದೃಷ್ಟಿಯ ಕ್ರಮಗಳಾಗಿವೆ ಎಂದು ಭಾರತೀಯ ಜನತಾ ಪಾರ್ಟಿ ಆರ್ಥಿಕ ಪ್ರಕೋಷ್ಠ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಸಿ. ಎ. ಎಸ್. ಎಸ್. ನಾಯಕ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಘೋಷಣೆಗಳ ಹಿಂದೆ ಇಂಧನ ಉಳಿತಾಯ, ಅನಗತ್ಯ ಆಮದು ಕಡಿತ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶವಿದ್ದು, ಇದರಿಂದ ವಿದೇಶಿ ವಿನಿಮಯ ಸಂಗ್ರಹ ಬಲವಾಗುವ ಜೊತೆಗೆ ದೇಶೀಯ ಕೈಗಾರಿಕೆಗಳಿಗೆ ಅವಕಾಶಗಳು ಹೆಚ್ಚಲಿವೆ ಎಂದರು.

ಭಾರತದ ವಿದೇಶಿ ವಿನಿಮಯ ಮೀಸಲು ಸುಮಾರು 700 ಬಿಲಿಯನ್ ಡಾಲರ್ ಮಟ್ಟದಲ್ಲಿದ್ದು, ಇದು 11 ತಿಂಗಳ ಆಮದು ಅಗತ್ಯಗಳನ್ನು ನಿಭಾಯಿಸಲು ಸಾಕಾಗುತ್ತದೆ ಎಂದು ಹೇಳಿದರು. “ಲೋಕಲ್ ಟು ಗ್ಲೋಬಲ್” ಕರೆ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಿದ್ದು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ಮತ್ತು ಉದ್ಯೋಗಾವಕಾಶ ವೃದ್ಧಿಗೆ ಕಾರಣವಾಗಲಿದೆ ಎಂದರು.

ವರ್ಕ್ ಫ್ರಮ್ ಹೋಮ್ ಹಾಗೂ ಹೈಬ್ರಿಡ್ ವರ್ಕ್ ಮಾದರಿಯಿಂದ ಟ್ರಾಫಿಕ್ ಒತ್ತಡ ಮತ್ತು ಇಂಧನ ಬಳಕೆ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆಯ ಜೊತೆಗೆ ಉದ್ಯೋಗಿಗಳ ಜೀವನಮಟ್ಟ ಸುಧಾರಣೆಯಾಗಲಿದೆ ಎಂದು ತಿಳಿಸಿದರು.

ಸೆಮಿಕಂಡಕ್ಟರ್, ವಿದ್ಯುತ್ ವಾಹನ, ನವೀಕರಿಸಬಹುದಾದ ಇಂಧನ, ರಕ್ಷಣಾ ಉತ್ಪಾದನೆ, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ಆರ್ಥಿಕತೆ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದ್ದು, ಯುಪಿಐ ಮೂಲಕ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ ಎಂದರು.

ಭಾರತ ಜಾಗತಿಕ ಮಟ್ಟದಲ್ಲಿ “ಭವಿಷ್ಯದ ಬೆಳವಣಿಗೆಯ ಎಂಜಿನ್” ಆಗಿ ಗುರುತಿಸಿಕೊಂಡಿದ್ದು, ಯುವಜನರ ಶಕ್ತಿ ದೇಶವನ್ನು ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರುತ್ತಿದೆ ಎಂದು ಹೇಳಿದರು.

“ಪ್ರಧಾನಿಯವರ ಘೋಷಣೆ ಸಂಕಷ್ಟದ ಸೂಚನೆ ಅಲ್ಲ; ಜವಾಬ್ದಾರಿಯುತ ನಾಯಕತ್ವದ ಸಂಕೇತ” ಎಂದು ಹೇಳಿದ ಅವರು, ಇದು ದೇಶದ ಆರ್ಥಿಕ ಭದ್ರತೆ ಮತ್ತು ದೀರ್ಘಕಾಲೀನ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಇಂಜಿನಿಯರ್ ಜಿ. ಯೋಗೀಶ್ ಪೈ, ರಾಜೇಶ್ ರಾವ್ ಎಂ., ಸಿ. ಎ. ಶ್ರೀಕೃಷ್ಣ ಭಟ್, ವಸಂತ ಶೆಟ್ಟಿ, ರಘುನಾಥ್ ಪೈ ಹಾಗೂ ಡಾ. ಎಸ್. ಎಂ. ಶಿವಪ್ರಕಾಶ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!