ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಹಾಗೂ ಶ್ರೀ ಸುಬ್ರಮಣ್ಯ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ಬ್ರಹ್ಮಕಳಶೋತ್ಸವವು ಸೋಮವಾರ ಭಕ್ತಿಭಾವ ಹಾಗೂ ವೈಭವದೊಂದಿಗೆ ನಡೆಯಿತು.
ಉತ್ಸವದ ಅಂಗವಾಗಿ ಚಂಡಿಕಾ ಹೋಮ, ಶುದ್ಧಿ ಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಕ್ಷೇತ್ರ ತಂತ್ರಿಗಳಾದ ಹಾರ್ನಾಡ್ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನೆರವೇರಿದವು.
ಇದೇ ವೇಳೆ ಲಲಿತಾ ಸಹಸ್ರನಾಮ ಪಾರಾಯಣ, ಭಜನೆ, ಶ್ರೀ ಮಹಾತಾಯಿಯ ದರ್ಶನ ಸೇವೆ, ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಜರುಗಿದವು.
ಕಾರ್ಯಕ್ರಮದಲ್ಲಿ ಕಾಸರಗೋಡು ಕೋಟೆ ನಾಯಕರ ಕುಟುಂಬಸ್ಥರು ಹಾಗೂ ಊರ-ಪರವೂರ ನೂರಾರು ಭಕ್ತರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.
ದೇವಸ್ಥಾನ ಸಮಿತಿ ಅಧ್ಯಕ್ಷ ನಾಗೇಶ್ ನಾಯಕ್ ಭಕ್ತರನ್ನು ಆದರದಿಂದ ಸ್ವಾಗತಿಸಿ ಶುಭ ಹಾರೈಸಿದರು. ಗೌರವಾಧ್ಯಕ್ಷರಾದ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.