ಮಂಗಳೂರು: ಕರಾವಳಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಏಕಕಾಲದಲ್ಲಿ ನಾಲ್ಕು ಅತ್ಯಾಧುನಿಕ ಮತ್ತು ಅದ್ದೂರಿ ಸಭಾಭವನಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲ್ಯಾಂಡ್ ಲಿಂಕ್ಸ್ ಸಂಸ್ಥೆಯ 45 ವರ್ಷಗಳ ಯಶಸ್ವಿ ಪಯಣದ ಸವಿನೆನಪಾಗಿ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆಯಾಗಿ ನಾಲ್ಕು ಭವ್ಯ ಸಭಾಂಗಣಗಳನ್ನು ನಿರ್ಮಿಸಲಾಗಿದ್ದು, ಮೇ 23ರಂದು ಅವುಗಳನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗುವುದು ಎಂದರು.
ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಲ್ಯಾಂಡ್ ಲಿಂಕ್ಸ್ ಕಳೆದ 45 ವರ್ಷಗಳಿಂದ ತನ್ನ ಪ್ರಾಮಾಣಿಕ ಹಾಗೂ ಯಶಸ್ವಿ ಸೇವೆಯ ಮೂಲಕ ಲಕ್ಷಾಂತರ ಜನರ ವಿಶ್ವಾಸ ಗಳಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧ ಭಾಗಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ನಾಲ್ಕು ಭವ್ಯ ಸಭಾಭವನಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಈ ಐತಿಹಾಸಿಕ ಸಮಾರಂಭಕ್ಕೆ ಆಂಧ್ರ ಪ್ರದೇಶದ ರಾಜ್ಯಪಾಲರಾದ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಮುಖ್ಯ ಅತಿಥಿಯಾಗಿ ಆಗಮಿಸಿ ಸಭಾಂಗಣಗಳನ್ನು ಉದ್ಘಾಟಿಸಲಿದ್ದಾರೆ. ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಮೇರಿಹಿಲ್‌ನಲ್ಲಿರುವ ಪಾಲೆಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಹಾ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಗಣ್ಯರ ಮಹಾಸಂಗಮ
ಸಮಾರಂಭದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಹಲವು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನಾಲ್ಕು ಭವ್ಯ ಸಭಾಭವನಗಳ ವೈಶಿಷ್ಟ್ಯ
- ಪಾಲೆಮಾರ್ ಕನ್ವೆನ್ಷನ್ ಸೆಂಟರ್, ಮೇರಿಹಿಲ್
ಮರದ ಕರಕುಶಲತೆಯಿಂದ ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಈ ಸಭಾಭವನವು ಸಾಂಪ್ರದಾಯಿಕ ಮದುವೆ ಸಮಾರಂಭಗಳ ಜೊತೆಗೆ ಕಾರ್ಪೊರೇಟ್ ಶೈಲಿಯ ಹೈಟೆಕ್ ಕಾರ್ಯಕ್ರಮಗಳಿಗೆ ಸೂಕ್ತವಾಗಿದೆ.
- ಪಾಲೆಮಾರ್ ಗಾರ್ಡನ್, ಮೊರ್ಗನ್ಸ್ ಗೇಟ್
ವಿಶಾಲ ಹಸಿರು ಮೈದಾನ, ಸುಂದರ ಹೊರಾಂಗಣ ಈಜುಕೊಳ ಹಾಗೂ ದೊಡ್ಡ ಮಟ್ಟದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಪಾರಂಪರಿಕ ಶೈಲಿಯ ಕಟ್ಟಡಗಳು ಇದರ ಪ್ರಮುಖ ಆಕರ್ಷಣೆಯಾಗಿದೆ.
- ಪಾಲೆಮಾರ್ ಫಾರ್ಮ್ಸ್, ಸುರತ್ಕಲ್
ಸುಮಾರು 20 ಎಕರೆ ಪ್ರದೇಶದಲ್ಲಿ ಪ್ರಕೃತಿ ಮಡಿಲಲ್ಲಿ ನಿರ್ಮಿಸಲಾದ ಈ ತಾಣವು ಮದುವೆ, ಹೊರಾಂಗಣ ಕಾರ್ಯಕ್ರಮ, ಮೆಹೆಂದಿ, ಬರ್ತ್‌ಡೇ ಪಾರ್ಟಿ ಹಾಗೂ ಕೌಟುಂಬಿಕ ಸಮಾರಂಭಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
- ನೇತ್ರಾವತಿ ಸಭಾಭವನ, ಕಡೆಕಾರ್ – ಜೆಪ್ಪಿನಮೊಗರು
ನೇತ್ರಾವತಿ ನದಿಯ ದಡದಲ್ಲಿರುವ ಪ್ರಶಾಂತ ವಾತಾವರಣದಲ್ಲಿ ನಿರ್ಮಿತ ಈ ಸಭಾಭವನವು ವಿವಾಹ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಅತ್ಯಂತ ಸೂಕ್ತವಾಗಿದೆ. ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ.
ವಿಶಾಲ ಪಾರ್ಕಿಂಗ್, ಸುಲಭ ಸಂಪರ್ಕ
ನಗರದ ವಾಹನ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆಯನ್ನು ಮನಗಂಡು ನಾಲ್ಕೂ ಸಭಾಭವನಗಳಲ್ಲಿ ವಿಶಾಲ ಹಾಗೂ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನೂರಾರು ವಾಹನಗಳು ಏಕಕಾಲದಲ್ಲಿ ಸಂಚರಿಸಲು ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಲಾಗಿದೆ.
ಇದೇ ವೇಳೆ ಎಲ್ಲಾ ಸಭಾಭವನಗಳನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವಂತೆ ನಿರ್ಮಿಸಲಾಗಿದ್ದು, ದೂರದ ಊರುಗಳಿಂದ ಆಗಮಿಸುವ ಅತಿಥಿಗಳಿಗೆ ಸುಲಭ ಸಂಚಾರ ವ್ಯವಸ್ಥೆ ಒದಗಿಸಲಾಗಿದೆ.
ಎಲ್ಲ ವರ್ಗದ ಜನರಿಗೆ ಕೈಗೆಟಕುವ ದರ
ಕಾರ್ಪೊರೇಟ್ ಶೈಲಿಯ ಅದ್ದೂರಿ ಕಾರ್ಯಕ್ರಮಗಳಿಂದ ಹಿಡಿದು ಸಾಮಾನ್ಯ ಜನರ ಸಣ್ಣ ಬಜೆಟ್ ಸಮಾರಂಭಗಳವರೆಗೆ ಎಲ್ಲರಿಗೂ ಅನುಕೂಲವಾಗುವಂತೆ ವಿವಿಧ ದರಗಳಲ್ಲಿ ಸಭಾಂಗಣಗಳನ್ನು ರೂಪಿಸಲಾಗಿದೆ ಎಂದು ಪಾಲೆಮಾರ್ ತಿಳಿಸಿದ್ದಾರೆ.
‘ಇದು ಕೇವಲ ಸಭಾಭವನವಲ್ಲ, ಸಾಮಾಜಿಕ ಚಳವಳಿ’
ಯಾವುದೇ ಜಾತಿ, ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾಗದೇ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶ ಮತ್ತು ಸೌಲಭ್ಯ ಒದಗಿಸುವ ಉದ್ದೇಶ ಈ ಯೋಜನೆಗಿದೆ. ಇದು ಕೇವಲ ಕಟ್ಟಡಗಳ ಉದ್ಘಾಟನೆಯಲ್ಲ; ಮದುವೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಸಮಾನತೆಯ ಹೊಸ ಚಿಂತನೆ ಪರಿಚಯಿಸುವ ಸಾಮಾಜಿಕ ಚಳವಳಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಯೋಜನೆಯಿಂದ ಡೆಕೋರೇಶನ್, ಕ್ಯಾಟರಿಂಗ್, ಫೋಟೋಗ್ರಫಿ, ಲೈಟಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳು ಹೆಚ್ಚಾಗಲಿವೆ ಎಂದರು.
ಇದೇ ವೇಳೆ ಮಂಗಳೂರಿನ ಕಡಲ ತೀರದಲ್ಲಿ ತೆರೆದ ಸಭಾಂಗಣವೊಂದನ್ನು ನಿರ್ಮಿಸುವ ಯೋಜನೆಯೂ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಕೃಷ್ಣ ಜೆ. ಪಾಲೆಮಾರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಕಾಸ ಎಜುಕೇಶನ್ ಟ್ರಸ್ಟ್ ಟ್ರಸ್ಟಿಗಳಾದ ಜೆ.ಕೆ. ರಾವ್, ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಜೆ. ಸಂತೋಷ್ ಕುಮಾರ್ ಹಾಗೂ ಲ್ಯಾಂಡ್ ಲಿಂಕ್ಸ್ ಉಪಾಧ್ಯಕ್ಷ ಪ್ರದೀಪ್ ಪಾಲೆಮಾರ್ ಉಪಸ್ಥಿತರಿದ್ದರು.