ಮಂಗಳೂರು, ಮೇ 22: ಮಂಗಳೂರು ಮಹಾನಗರದ ಜಿಪ್ಪು ಕಡೆಕಾರು ಪ್ರದೇಶದಲ್ಲಿರುವ ನೇತ್ರಾವತಿ ನದಿಯ ಕಿನಾರೆಯ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಾನದಲ್ಲಿ ಹಾಗೂ ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಯ ಚಾಲನಾ ಕಾರ್ಯಕ್ರಮ ಶುಕ್ರವಾರ ಗುರುವನ ಶ್ರೀ ದುರ್ಗಾ ಕ್ಷೇತ್ರದಲ್ಲಿ ಜರುಗಿತು.
ನೇತ್ರಾವತಿ ಸಭಾಭವನ, ಪಾಲೇಮಾರ್ ಫಾರ್ಮ್ಸ್, ಪಾಲೇಮಾರ್ ಕನ್ವೆನ್ಷನ್ ಸೆಂಟರ್ ಹಾಗೂ ಪಾಲೇಮಾರ್ ಗಾರ್ಡನ್ ಸಭಾಂಗಣಗಳ ಅಧಿಕೃತ ಲೋಕಾರ್ಪಣೆ ಮೇ 23ರಂದು ನಡೆಯಲಿದ್ದು, ಅದರ ಅಂಗವಾಗಿ ಶುಕ್ರವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದ ಮರಕಡ ಶ್ರೀ ಗುರುಪರಾಶಕ್ತಿ ಮಠದ ಮಠಾಧಿಪತಿ ಪೂಜ್ಯ ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, “ಈ ಕ್ಷೇತ್ರವು ಸಾಮಾನ್ಯ ಕ್ಷೇತ್ರವಲ್ಲ. ಇದರ ಇತಿಹಾಸವು ಪುರಾಣಗಳ ಭಾವನೆಗೆ ಮಾತ್ರ ಸೀಮಿತವಾಗಿಲ್ಲ. ಕೃಷ್ಣ ಜೆ. ಪಾಲೇಮಾರ್ ನಿರ್ಮಿಸಿರುವ ಈ ಸಭಾಂಗಣಗಳು ಕೇವಲ ಕಾರ್ಯಕ್ರಮಗಳ ತಾಣಗಳಲ್ಲ, ಇವು ಆಧ್ಯಾತ್ಮಿಕ ಕೇಂದ್ರಗಳ ಸಂಕೇತಗಳಾಗಿವೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೂಜನೀಯ ಮಾತೆ ಶ್ರೀಮತಿ ಶಕುಂತಲಾ ನರೇಂದ್ರನಾಥ ಕೋಟೆಕಾರ್ ಮಾತನಾಡಿ, 1974ರ ಭೀಕರ ಪ್ರಳಯದ ಸಂದರ್ಭದಲ್ಲಿಯೂ ಶ್ರೀ ಮಲ್ಲಿಕಾರ್ಜುನ ದೇವರ ವಸ್ತುಗಳಿಗೆ ಯಾವುದೇ ಹಾನಿಯಾಗದಿರುವುದು ಈ ಕ್ಷೇತ್ರದ ದೈವೀ ಶಕ್ತಿಗೆ ಸಾಕ್ಷಿಯಾಗಿದೆ ಎಂದರು. “ಪಾಲೇಮಾರ್ ಅವರು ಈ ಸಭಾಭವನಗಳಿಗೆ ಇಲ್ಲಿಂದಲೇ ಚಾಲನೆ ನೀಡುತ್ತಿರುವುದರ ಹಿಂದೆ ಶ್ರೀ ಮಲ್ಲಿಕಾರ್ಜುನನ ಸಂಕಲ್ಪವೇ ಕಾರಣವಾಗಿದೆ. ಮೂಲ ಮನೆ ಮತ್ತು ಕುಟುಂಬದ ಬಗ್ಗೆ ಅವರಿಗಿರುವ ಚಿಂತನೆ ಶ್ಲಾಘನೀಯ” ಎಂದು ಹೇಳಿದರು.
ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, “ಪೂಜ್ಯ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಗಳ ಆಶೀರ್ವಾದದ ಫಲವಾಗಿ ಈ ಸತ್ಕಾರ್ಯಗಳು ನಡೆಯುತ್ತಿವೆ. ಪಾಲೇಮಾರ್ ದಂಪತಿಯ ಸರಳತೆ ಮತ್ತು ಹೃದಯ ಶ್ರೀಮಂತಿಕೆ ಮಾದರಿಯಾಗಿದೆ” ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, “‘ಪಾಲೇಮಾರ್’ ಎಂಬುದು ಕೇವಲ ನನ್ನ ಹೆಸರಲ್ಲ, ಅದು ‘ಪಾಲೆ ಮರ’ದ ನೆನಪು. ಈ ಭಾಗದಲ್ಲಿ ಹಿಂದೆ ನೂರಾರು ಪಾಲೆ ಮರಗಳಿದ್ದವು. ನನ್ನ ತಂದೆಯವರು ಇಲ್ಲಿಯೇ ಸಣ್ಣ ಗುಡಿಸಲು ನಿರ್ಮಿಸಿ ಜೀವನ ಆರಂಭಿಸಿದ್ದರು. ಪ್ರಕೃತಿಯ ಸಂಕೇತವಾದ ಆ ಮರದ ನೆನಪಿನಲ್ಲೇ ‘ಪಾಲೇಮಾರ್’ ಎಂದು ಹೆಸರಿಟ್ಟೆ” ಎಂದು ಭಾವುಕರಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ವಹಿಸಿದ್ದರು. ಸುಕುಮಾರ್ ಜಪ್ಪು ಸ್ವಾಗತಿಸಿದರು. ಅತಿಥಿಗಳನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು. ಜೆ.ಕೆ. ರಾವ್ ಧನ್ಯವಾದ ಸಮರ್ಪಿಸಿದರು. ನವನೀತ್ ಶೆಟ್ಟಿ ಕದ್ರಿ ಹಾಗೂ ಕಲ್ಪನಾ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು