ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಸರ್ಕಾರ ಮಧ್ಯಪ್ರವೇಶಿಸಲಿ:ಆಮ್ ಆದ್ಮಿ ಪಾರ್ಟಿ ಆಗ್ರಹ

ಮಂಗಳೂರು, ಮೇ 22: ಪ್ರಾಥಮಿಕ ಶಿಕ್ಷಣದ ವ್ಯಾಪಾರೀಕರಣ ಹಾಗೂ ಸರ್ಕಾರಿ ಶಾಲೆಗಳ ವ್ಯವಸ್ಥಿತ ಕುಸಿತದ ಬಗ್ಗೆ ಆಮ್‌ ಆದ್ಮಿ ಪಾರ್ಟಿ (ಆಪ್‌) ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಖಾಸಗಿ ಶಾಲೆಗಳ ಗಗನಚುಂಬಿ ಶುಲ್ಕ ನಿಯಂತ್ರಣಕ್ಕೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದೆ.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್‌ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್‌, 2026-27ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಖಾಸಗಿ ಶಾಲೆಗಳು ವಿವಿಧ ರೀತಿಯ ಶುಲ್ಕಗಳ ಹೆಸರಿನಲ್ಲಿ ಪೋಷಕರನ್ನು ಶೋಷಿಸುತ್ತಿವೆ ಎಂದು ಆರೋಪಿಸಿದರು.

“ಗುಣಮಟ್ಟದ ಶಿಕ್ಷಣ ಇಂದು ಶ್ರೀಮಂತರ ಪಾಲಿನ ಐಷಾರಾಮಿ ವಸ್ತುವಾಗಿ ಮಾರ್ಪಟ್ಟಿದೆ. ಸರ್ಕಾರ ‘ಬೇಟಿ ಬಚಾವೋ, ಬೇಟಿ ಪಡಾವೋ’ ಹಾಗೂ ‘ಸರ್ವ ಶಿಕ್ಷಣ ಅಭಿಯಾನ’ದಂತಹ ಘೋಷಣೆಗಳನ್ನು ನೀಡುತ್ತಿದ್ದರೂ, ನೆಲಮಟ್ಟದ ವಾಸ್ತವ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ,” ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ನುರಿತ ಶಿಕ್ಷಕರ ಅಭಾವದಿಂದ ಪೋಷಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ವಾರ್ಷಿಕ 2.5 ಲಕ್ಷ ರೂ. ಆದಾಯ ಹೊಂದಿರುವ ಸಾಮಾನ್ಯ ಕುಟುಂಬದ ಬಹುಪಾಲು ಆದಾಯ ಮಕ್ಕಳ ಶಿಕ್ಷಣ ಶುಲ್ಕಕ್ಕೆ ತೆರಳುತ್ತಿದ್ದು, ಅನೇಕ ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉಚಿತ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದ್ದರೆ, ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಕನಿಷ್ಠ ಶೇ.15ರಷ್ಟು ಬಜೆಟ್‌ ಹಂಚಿಕೆ ಮಾಡಬೇಕೆಂದು ಶಿಕ್ಷಣ ತಜ್ಞರು ನಿರಂತರವಾಗಿ ಒತ್ತಾಯಿಸುತ್ತಿದ್ದರೂ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಲ್ಪ ಅನುದಾನವು ಖಾಸಗಿ ಶಾಲಾ ಲಾಬಿಗೆ ಅನುಕೂಲವಾಗುವಂತಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಕ್ಷಣ ಮಧ್ಯಪ್ರವೇಶಿಸಿ ಖಾಸಗಿ ಶಾಲೆಗಳ ಶುಲ್ಕ ರಚನೆಗೆ ನಿಯಂತ್ರಣ ತರಬೇಕು. ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಬಜೆಟ್‌ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌.ಆರ್‌. ಲೋಬೊ, ಸೀಮಾ ಮಡಿವಾಳ, ಎಸ್‌.ಎಲ್‌. ಪಿಂಟೊ, ವಾಸುದೇವ್‌ ಹಾಗೂ ನಜೀರ್‌ ಅಹಮದ್‌ ಬಾವ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!