ಮಳೆಗಾಲದಲ್ಲಿ ಮಣ್ಣು, ರಸ್ತೆ ಹಾಗೂ ಗುಡ್ಡ ಅಗೆತಕ್ಕೆ ನಿಷೇಧ

ಮಂಗಳೂರು, ಮೇ 23: ಮಳೆಗಾಲದ ಅವಧಿಯಲ್ಲಿ ಭೂಕುಸಿತ ಸೇರಿದಂತೆ ಅನಾಹುತಗಳನ್ನು ತಡೆಗಟ್ಟುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಮಣ್ಣು ಅಗೆತ, ರಸ್ತೆ ಅಗೆತ ಹಾಗೂ ಗುಡ್ಡ ಅಗೆತ ಕಾಮಗಾರಿಗಳಿಗೆ ನಿಷೇಧ ಹೇರಲಾಗಿದೆ.

ಈ ಕುರಿತು ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದು, ಮಣ್ಣು ಕುಸಿತ, ಗುಡ್ಡ ಕುಸಿತ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಹಾಗೂ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ ಯಾವುದೇ ರೀತಿಯ ಅಗೆತ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಸೂಚಿಸಲಾಗಿದೆ. ಇದೇ ಅವಧಿಯಲ್ಲಿ ಮಣ್ಣು ಸಾಗಾಟಕ್ಕೂ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಈಗಾಗಲೇ ಪಾಲಿಕೆಯಿಂದ ಪರವಾನಿಗೆ ಪಡೆದು ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿರುವವರು ಕಾಮಗಾರಿ ನಡೆಯುವ ಸ್ಥಳದ ಸುತ್ತಮುತ್ತ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಬ್ಯಾಕ್ ಫಿಲ್ಲಿಂಗ್ ಕಾಮಗಾರಿಯನ್ನು ಸುರಕ್ಷತಾ ನಿಯಮಾವಳಿಗಳ ಅನುಸಾರ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

ಯಾವುದೇ ಅನಾಹುತ ಸಂಭವಿಸಿದಲ್ಲಿ ಅದರ ಸಂಪೂರ್ಣ ಹೊಣೆಯನ್ನು ಕಟ್ಟಡ ಮಾಲೀಕರು ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳು ಹೊರಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

ನಗರದ ಕುಂಟಿಕಾನ ಪ್ರದೇಶದಲ್ಲಿ ಗುರುವಾರ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದ ಹಿನ್ನೆಲೆಯಲ್ಲೇ ಮಹಾನಗರ ಪಾಲಿಕೆ ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!