
ಪ್ರವಾಸಿ ವಾಹನಗಳಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗುತ್ತಿರುವ ತಾರತಮ್ಯ ಮತ್ತು ಅವೈಜ್ಞಾನಿಕ ದರವಸೂಲಿ ವಿರೋಧಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಟ್ಯಾಕ್ಸಿ ಚಾಲಕರು ನವೆಂಬರ್ 11 ರಿಂದ ಕೆಂಜಾರುವಿನಲ್ಲಿ ವಿಮಾನ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡುವ ಮೂಲಕ ತಮ್ಮ ನ್ಯಾಯಯುತ ಬೇಡಿಕೆಗಳ ಆಗ್ರಹಕ್ಕಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದ್ದಾರೆ ಎಂದು ಈ ಹಿಂದೆ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಉಭಯ ಜಿಲ್ಲೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಟ್ಯಾಕ್ಸಿ ಸಂಘದ ಅಧ್ಯಕ್ಷರಾದ ಶ್ರೀ ರಘುಪತಿ ಭಟ್ ರವರು ಮಾಹಿತಿ ನೀಡಿದ್ದರು.

ಆದರೆ ಇದೀಗ ಹೋರಾಟದ ದಿನಾಂಕದಲ್ಲಿ ಬದಲಾವಣೆಯಾಗಿದ್ದು ದೀಪಾವಳಿ ಹಬ್ಬದ ಸಡಗರದ ಹಿನ್ನೆಲೆ ಟ್ಯಾಕ್ಸಿ ಚಾಲಕರ ಅನಿರ್ದಿಷ್ಟಾವಧಿ ಧರಣಿ ನವೆಂಬರ್ 17ಕ್ಕೆ ಮುಂದೂಡ ಲಾಗಿದೆ ಎಂದು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಸಂಘದ ಅಧ್ಯಕ್ಷ ಹಾಗೂ ಉಡುಪಿ ಮಾಜಿ ಶಾಸಕರಾದ ಶ್ರೀ ರಘುಪತಿ ಭಟ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

ನವೆಂಬರ್ 17ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಬಜ್ಪೆ ಕೆಂಜಾರುವಿನಲ್ಲಿ ವಿಮಾನ ನಿಲ್ದಾಣ ಪ್ರವೇಶ ದ್ವಾರದ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಪ್ರಾರಂಭವಾಗಲಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟ್ಯಾಕ್ಸಿ ಚಾಲಕರ ಸಮಾನ ಮನಸ್ಕ ಸಂಘಟನೆಗಳು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳು ಹೋರಾಟದಲ್ಲಿ ಭಾಗಿಯಾಗಲಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ಅಧ್ಯಕ್ಷರಾದ ಆನಂದ ಕೆ ರವರು ತಿಳಿಸಿದರು


